Advertisement

Mangaluru; ಹಿಂದುತ್ವವೇ ನನ್ನ ಬದ್ಧತೆ- ಅಭಿವೃದ್ಧಿಯೇ ಆದ್ಯತೆ: ಬೃಜೇಶ್‌ ಚೌಟ

01:21 AM Mar 14, 2024 | Team Udayavani |

ಮಂಗಳೂರು: “ಹಿಂದುತ್ವವೇ ನನ್ನ ಬದ್ಧತೆ – ಅಭಿವೃದ್ಧಿಯೇ ಆದ್ಯತೆ’ ಈ ಎರಡು ಮೂಲಮಂತ್ರದೊಂದಿಗೆ ಎಲ್ಲರ ಸಹಕಾರ ಪಡೆದು ಕೆಲಸ ಮಾಡುತ್ತೇನೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ| ಬೃಜೇಶ್‌ ಚೌಟ ಹೇಳಿದರು.

Advertisement

ಕೆಪಿಟಿಯ ವೀರ ಯೋಧರ ಯುದ್ಧಸ್ಮಾರಕಕ್ಕೆ ಭೇಟಿ ನೀಡಿದ ಸಂದರ್ಭ ಅವರು ಮಾಧ್ಯಮದ ಜತೆ ಮಾತನಾಡಿ, ತುಳುನಾಡಿನ ಮಣ್ಣಿಗೆ ವಿಶೇಷವಾದ ಶಕ್ತಿಯಿದೆ. ಇದಕ್ಕೆ ಗೌರವ ಕೊಡುತ್ತಿರುವವನು ನಾನು. ಅಭ್ಯರ್ಥಿಯಾಗಿ ಘೋಷಣೆಯಾದ ಕೂಡಲೇ ನನ್ನ ತಂದೆ-ತಾಯಿಯ ಹಾಗೂ ಶ್ರೀ ಶರವು ಮಹಾಗಣಪತಿ ದೇವರ ಅಶೀರ್ವಾದ ಪಡೆದಿದ್ದೇನೆ. ತಾಯಿ ನೆಲಕ್ಕೆ ಪ್ರಾಣವನ್ನು ಅರ್ಪಣೆ ಮಾಡಿದ ವೀರ ಯೋಧರ ಸ್ಮಾರಕಕ್ಕೆ ಬಂದು ಬಲಿದಾನಗೈದ ಮಣ್ಣಿನ ಮಕ್ಕಳಿಗೆ ಗೌರವವನ್ನು ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಯುವ ಮುಖ ಕ್ಯಾ| ಬೃಜೇಶ್‌ ಚೌಟ
ನಗರದ ರಥಬೀದಿಯಲ್ಲಿ ನೆಲೆಸಿರುವ ಕ್ಯಾ| ಬೃಜೇಶ್‌ ಚೌಟ ಕಾಲೇಜು ದಿನಗಳಲ್ಲಿಯೇ ಎನ್‌ಸಿಸಿಯಲ್ಲಿ ತೊಡಗಿಕೊಂಡಿದ್ದು ಮಂಗಳೂರು ವಿ.ವಿ.ಯಲ್ಲಿ ಅತ್ಯುತ್ತಮ ಕೆಡೆಟ್‌ ಎಂಬ ಹೆಗ್ಗಳಿಕೆ ಪಡೆದಿದ್ದರು. ಮಂಗಳೂರಿನ ಮಿಲಾಗ್ರಿಸ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಪಿಯು ಮತ್ತು ಬಿಎಸ್ಸಿ ಪದವಿ ಪೂರೈಸಿದರು.

ಮಧ್ಯಪ್ರದೇಶದ ಇಂದೋರ್‌ ಐಐಎಂನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಯುಪಿಎಸ್ಸಿ ಮೂಲಕ ಡಿಫೆನ್ಸ್‌ ಪರೀಕ್ಷೆ ಬರೆದು ತೇರ್ಗಡೆಗೊಂಡು ಚೆನ್ನೈ ಯಲ್ಲಿ ಆಫೀಸರ್ಸ್‌ ಟ್ರೈನಿಂಗ್‌ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂಸೇನೆ ಸೇರಿದ್ದರು. ಪ್ರತಿಷ್ಠಿತ 8ನೇ ಗೋರ್ಖಾ ರೈಫಲ್ಸ್‌ 7ನೇ ಬೆಟಾಲಿಯನ್‌ನಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್‌ ಹುದ್ದೆಗೇರಿದ್ದರು.

ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ಸಂಘದ ಪ್ರೇರಣೆಯಿಂದ ಮುಂದೆ ಭಾರತೀಯ ಸೇನೆಗೆ ಸೇರಿದ್ದ ಚೌಟ ಸೇನಾ ನಿವೃತ್ತಿಯ ಬಳಿಕ ಮಂಗಳೂರಿಗೆ ಆಗಮಿಸಿ ಆರೆಸ್ಸೆಸ್‌ನ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡರು.

Advertisement

2013ರಲ್ಲಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, 2016-19ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, 2019ರಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಹಿತ ವಿವಿಧ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪಕ್ಷದ ಚಟುವಟಿಕೆ ಜೊತೆಗೆ ಸಮರ್ಥನ್‌ ಫೌಂಡೇಶನ್‌ ಮೂಲಕ ಮಂಗಳೂರಿನಲ್ಲಿ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಮಂಗಳೂರು ಕಂಬಳ ಆಯೋಜನೆಯ ಮೂಲಕವೂ ಗುರುತಿಸಿಕೊಂಡವರು.

Advertisement

Udayavani is now on Telegram. Click here to join our channel and stay updated with the latest news.

Next