ಬಾಗಲಕೋಟೆ: ಹಿಂದೂ ಸಮಾಜದಿಂದ ಪೂಜಿಸಲ್ಪಡುವ, ತಾಯಿ ಸ್ವರೂಪದ ಗೋ ಮಾತೆಯನ್ನು ಹಿಂಸಾತ್ಮಕವಾಗಿ ಕೊಲ್ಲುತ್ತಿರುವ ವ್ಯಕ್ತಿಗಳನ್ನು ಬಂಧಿಸಬೇಕು. ರಾಜ್ಯಾದ್ಯಂತ ಇರುವ ಅಕ್ರಮ ಕಸಾಯಿ ಖಾನೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಉತ್ತರಪ್ರಾಂತ ಮಾತೃ ಸುರಕ್ಷಾ ಪ್ರಮುಖ ಶ್ರೀಕಾಂತ ಹೊಸಕೇರಿ ಒತ್ತಾಯಿಸಿದರು.
ಹಿಂದೂ ಜಾಗರಣ ವೇದಿಕೆಯಿಂದ ಬಸವೇಶ್ವರ ವೃತ್ತದ ಹೊಳೆ ಆಂಜನೇಯ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಅವರು ಮಾತನಾಡಿದರು.
ಗೋಹತ್ಯೆ ಮಾಡುವ ಹಂತಕರು ಹಾಗೂ ಅಕ್ರಮ ಸಾಗಾಣಿಕೆ ಮಾಡುವವರನ್ನು ತಕ್ಷಣವೇ ಸರ್ಕಾರ ಬಂಧಿಸಿ ಶಿಕ್ಷೆ ನೀಡಬೇಕು. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಿ ಪೊಲೀಸ್ ಇಲಾಖೆಗೆ ತಿಳಿಸಿದರೂ ಕೂಡ ಹಾಗೂ ಕಾಯ್ದೆ ಆದೇಶ ಪ್ರತಿ ಪೊಲೀಸರಿಗೆ ಬಂದರೂ ಗೋ ಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯ ಪ್ರತಿ ತಾಲೂಕು, ಹೋಬಳಿ, ನಗರ ಮಟ್ಟದಲ್ಲಿ ಗೋ ಹತ್ಯೆ ನಡೆಯುತ್ತಿದೆ. ಇವುಗಳನ್ನು ನಿಲ್ಲಿಸಲು ಪೊಲೀಸ್ ಇಲಾಖೆಯ ಜತೆಗೆ ನಗರಸಭೆ, ಸ್ಥಳೀಯ ಆಡಳಿತ ಕೈ ಜೋಡಿಸುವ ಕೆಲಸ ಮಾಡಬೇಕು. ಗೋಮಾತೆಯನ್ನು ಪೂಜಿಸುವ ಹಿಂದೂ ಸಮಾಜಕ್ಕೆ ಗೋ ಮಾತೆಯನ್ನು ಹಿಂಸಾತ್ಮಕವಾಗಿ ಕೊಲ್ಲುವ ಮೂಲಕ ಹಿಂದೂಗಳ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕದಿದ್ದರೆ ಹಿಂದೂ ಸಮಾಜ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಪ್ರತಿ ಭಾಗದಲ್ಲಿ ಹಿಂಸಾತ್ಮಕವಾಗಿ ಗೋ ಮಾತೆಯನ್ನು ಹತ್ಯೆ ಮಾಡಲಾಗುತ್ತದೆ. ಇಂತಹ ಹಂತಕರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಸಮಾಜ ನಿರಂತರವಾಗಿ ಮಾಡಬೇಕಾಗಿದೆ ಎಂದು ಹೇಳಿದರು.
ಮುರನಾಳ ಮಳೆರಾಜೇಂದ್ರ ಮಠದ ಮೌನೇಶ್ವರ ಸ್ವಾಮೀಜಿಯವರು ಸಾನಿಧ್ಯ ವಹಿಸಿ, ತಾಯಿಯ ಸಮಾನವಾದ ಗೋಮಾತೆಯನ್ನು ಪ್ರತಿಯೊಬ್ಬರು ಪೂಜಿಸಬೇಕು ಎಂದು ಹೇಳಿದರು. ಹಿಂದೂ ಜಾಗರಣ ವೇದಿಕೆಯ ಉತ್ತರ ಪ್ರಾಂತ ಉಪಾಧ್ಯಕ್ಷ ಕಿರಣ ಪವಾಡ ಶೆಟ್ಟರ, ಜಿಲ್ಲಾಧ್ಯಕ್ಷ ಆನಂದ ಮುತ್ತಗಿ, ಗುರುರಾಜ ಜಾಬಶೆಟ್ಟಿ, ಕುಮಾರಸ್ವಾಮಿ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.