ಉಡುಪಿ: ಅಸ್ಪ್ರಶ್ಯತೆ ಮುಕ್ತ ಭಾರತ, ಬಡತನ ಮುಕ್ತ, ಸಾಲ ಮುಕ್ತ ರೈತ ಇವು ವಿಶ್ವ ಹಿಂದೂ ಪರಿಷತ್‌ನ ಗುರಿ ಎಂದು ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ| ಪ್ರವೀಣ್ ಭಾç ತೊಗಾಡಿಯಾ ಘೋಷಿಸಿದರು.
ರವಿವಾರ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಈ ಬಗ್ಗೆ ವಿಹಿಂಪ ಕ್ರಿಯಾ ಯೋಜನೆ ಕೈಗೆತ್ತಿಕೊಂಡಿದೆ ಎಂದರು.
ಪ್ರತಿ ಗ್ರಾಮಗಳಲ್ಲಿ ಭೋಜನ, ನೀರು, ಶ್ಮಶಾನ ಬಳಕೆಯಲ್ಲಿ ಸಮಾನತೆ ಬೇಕು. ದಲಿತರ ಮನೆಯವರೊಂದಿಗೆ ಸ್ನೇಹ, ವಿಶ್ವಾಸ ಇರಿಸಿಕೊಂಡು ಅವರ ಮನೆಯ ಕನ್ಯೆಯನ್ನು ಮನೆಗೆ ಕರೆದು ಕನ್ಯಾ ಪೂಜೆ ನಡೆಸಬೇಕು. ಶಿಕ್ಷಣ, ಆರೋಗ್ಯ, ವಿವಾಹದ ವಿಷಯದಲ್ಲಿ ಅಗತ್ಯದ ನೆರವು ನೀಡಬೇಕು ಎಂಬ ಪಂಚ ನೀತಿಗಳನ್ನು ಅಳವಡಿಸಲಾಗುವುದು ಎಂದರು.
1 ಕೋಟಿ ಜನರಿಗೆ ಮನೆ ಇಲ್ಲ. 10 ಕೋಟಿ ಜನರಿಗೆ ಉದ್ಯೋಗವಿಲ್ಲ. 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೀಗಿರುವಾಗ ಸಮೃದ್ಧ ಭಾರತ ಹೇಗೆ ಸಾಧ್ಯ? ಆದ್ದರಿಂದ ವಿಹಿಂಪ ಯೋಜನೆಯಂತೆ 10,000 ವೈದ್ಯರು ವಾರದಲ್ಲಿ ಒಂದು ದಿನ ಅಗತ್ಯದ ಜನರಿಗೆ ಉಚಿತ ಸೇವೆ ಸಲ್ಲಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಹಿಂದೂ ಎನ್ನುವುದು ಆಚರಣೆಯಿಂದ, ಜಾಗೃತಿಯಿಂದ, ಸಕ್ರಿಯತೆಯಿಂದ ತ್ರಿಕರಣಪೂರ್ವಕ ಆಗಬೇಕು ಎಂದರು.
ರಾಮ ಮಂದಿರ ನಿರ್ಮಿಸಲು ಸಂತರು ನಿರ್ಧರಿಸಿದ್ದಾರೆ. ಪ್ರಭು ರಾಮಚಂದ್ರ ಜೋಪಡಿಯಲ್ಲಿರಬೇಕೆ ಎಂದು ಪ್ರಶ್ನಿಸಿದರು. ನಾವು ಎಂಪಿ, ಎಂಎಲ್‌ಎ, ಸಚಿವ ಸೀಟುಗಳನ್ನು ಕೇಳುತ್ತಿಲ್ಲ. ಅಯೋಧ್ಯೆ ರಾಮ ಮಂದಿರದ ಶಾಸ್ತ್ರೀಯ ಚೌಕಟ್ಟಿನೊಳಗೆ ಮಸೀದಿ ಇಲ್ಲ. ಇಲ್ಲಿ ಮಂದಿರ ನಿರ್ಮಿಸುವುದು ನಮ್ಮ ಹಕ್ಕು ಎಂದು ಹೇಳಿದರು.