ಚೆನ್ನೈ: ಇಂದು ಪ್ರೇಮಿಗಳ ದಿನ. ಭಾರತದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಬಾರದು ಅದು ನಮ್ಮ ಸಂಸ್ಕೃತಿಯಲ್ಲ ಎಂದು ಕೆಲ ಸಂಘಟನೆಗಳು ಹಲವೆಡೆ ವಿರೋಧ ವ್ಯಕ್ತಪಡಿಸಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲೆಡೆ ಪ್ರತಿಭಟನೆ ನಡೆಸಿದೆ.
ತಮಿಳುನಾಡಿನಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪ್ರೇಮಿಗಳ ದಿನವನ್ನು ವಿರೋಧಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ತಮಿಳುನಾಡಿನ ಹಿಂದೂ ಮುನ್ನಾನಿ ಎನ್ನುವ ಸಂಘಟನೆ ವ್ಯಾಲೆಂಟೈನ್ಸ್ ಡೇಯನ್ನು ವಿರೋಧಿಸಿ, ಬೀದಿ ನಾಯಿಗಳ ಅಣುಕು ಮದುವೆ ಮಾಡಿ, ಪ್ರತಿಭಟನೆ ನಡೆಸಿದ್ದಾರೆ. ಹಿಂದೂ ಮುನ್ನಾನಿ ಸಂಘಟನೆ ಪ್ರತಿವರ್ಷ ಪ್ರೇಮಿಗಳ ದಿನವನ್ನು ವಿರೋಧಿಸಿ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತದೆ.
ಸೋಮವಾರ ಹಿಂದೂ ಮುನ್ನಾನಿ ಕಾರ್ಯಕರ್ತರು ಎರಡು ನಾಯಿಗಳನ್ನು ಕರೆತಂದು ಅವುಗಳಿಗೆ ಬಟ್ಟೆ,ಹಾರಗಳನ್ನು ಹಾಕಿ, ಅಣಕು ಮದುವೆ ಮಾಡಿಸಿದೆ.
ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ. ಇದನ್ನು ವಿರೋಧಿಸಿ ನಾವು ನಾಯಿಗಳ ಮದುವೆಯನ್ನು ನಡೆಸಿದ್ದೇವೆ ಎಂದು ಹಿಂದೂ ಮುನ್ನಾನಿ ಕಾರ್ಯಕರ್ತರು ಹೇಳಿದ್ದಾರೆ.