Advertisement

ಕುಂದಾಪುರ : ಹಿಂದೂ ಸಂಘಟನೆಯಿಂದ ಠಾಣೆಗೆ ಮುತ್ತಿಗೆ

11:11 AM Oct 09, 2021 | Team Udayavani |

ಕುಂದಾಪುರ: ಪ್ರಕರಣದ ವಿಚಾರಣೆಗೆ ಕರೆತಂದ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಿ ಶುಕ್ರವಾರ ರಾತ್ರಿ ಹಿಂದೂ ಜಾಗರಣ ವೇದಿಕೆ ಸಂಘಟನೆಯ ಕಾರ್ಯಕರ್ತರು ಕುಂದಾಪುರ ಠಾಣೆಗೆ ಮುತ್ತಿಗೆ ಹಾಕಿದರು.

Advertisement

ಸುರತ್ಕಲ್‌ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಚೈತ್ರಾ ಕುಂದಾಪುರ ಮಾಡಿದ ಭಾಷಣದ ತಿರುಚಿದ ವೀಡಿಯೋವನ್ನು ಅನ್ಯಧರ್ಮೀಯ ಯುವಕನೊಬ್ಬ ಸ್ಟೇಟಸ್‌ ಹಾಕಿಕೊಂಡಿದ್ದಾನೆ ಎಂದು ಒಂದಷ್ಟು ಮಂದಿ ಹಲ್ಲೆ ಮಾಡಿದ್ದರು ಎಂಬ ದೂರಿನ ಸಂಬಂಧ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆತಂದಿದ್ದರು. ವಿಚಾರಣೆ ಬಳಿಕ ಮುಚ್ಚಳಿಕೆ ಬರೆಸಿ ಅವರನ್ನು ಬಿಡಲಾಗಿತ್ತು. ಠಾಣೆಗೆ ಕರೆಸಿದ ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂದು ರಾತೋರಾತ್ರಿ ಸಂಘಟನೆಯ ನೂರಾರು ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದರು.

ಪೊಲೀಸರ ನಿರಾಕರಣೆಯನ್ನು ಮಾನ್ಯ ಮಾಡಲಿಲ್ಲ. ಮನವಿಗೆ ಬೆಲೆ ಕೊಡಲಿಲ್ಲ. ಭಜನೆ ಮಾದರಿಯಲ್ಲಿ ಹಾಡುಗಳನ್ನು ಹಾಡುತ್ತಾ ಪ್ರತಿಭಟಿಸಿದರು. ಸ್ಥಳಕ್ಕೆ ಡಿವೈಎಸ್ಪಿ ಶ್ರೀಕಾಂತ್‌, ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ ಆಗಮಿಸಿ ಸಮಾಧಾನಪಡಿಸಿದರು. ಮೇಲ್ನೋಟಕ್ಕೆ ಹಲ್ಲೆ ನಡೆದಂತೆ ಕಾಣುವುದಿಲ್ಲ. ಲಿಖೀತ ದೂರು ನೀಡಿದರೆ ತನಿಖೆ ನಡೆಸಲಾಗುವುದು. ಠಾಣೆಗಳಲ್ಲಿ ಹಲ್ಲೆ ನಡೆಸದಂತೆ ಸೂಚಿಸಲಾಗುವುದು ಎಂದರು. ಜಾಗರಣ ವೇದಿಕೆ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕುಕ್ಕೆಹಳ್ಳಿ, ಜಾಗರಣ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಸಂಘಟನೆ ಸುಮ್ಮನಿರುವುದಿಲ್ಲ. ಈ ಪ್ರಕರಣದ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಹೀಗಾಗದಂತೆ ಭರವಸೆ ನೀಡಬೇಕು ಎಂದರು. ಡಿವೈಎಸ್ಪಿ ತನಿಖೆಯ ಭರವಸೆ ಮೇರೆಗೆ ಪ್ರತಿಭಟನೆ ಕೊನೆಗೊಂಡಿತು. ಜಾಗರಣ ವೇದಿಕೆ ಮುಖಂಡರಾದ ಶಂಕರ್‌ ಕೋಟ, ಪ್ರವೀಣ್‌ ಯಕ್ಷಿಮಠ, ಆದರ್ಶ ಕೋಟೇಶ್ವರ, ನವೀನ್‌ ಗಂಗೊಳ್ಳಿ ಮೊದಲಾದವರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next