Advertisement

ಹಿಂದಿ ಇನ್ನೂ ಹಾಗೇ ಇದೆ ಮೆರೆ ದೋಸ್ತ್!

11:51 AM Aug 29, 2017 | |

ಬೆಂಗಳೂರು: “ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿರುವ ಹಿಂದಿ ತೆರವಿಗೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿ ತಿಂಗಳು ಕಳೆದರೂ, ಬಿಎಂಆರ್‌ಸಿ “ಕ್ಯಾರೆ’ ಎನ್ನುತ್ತಿಲ್ಲ. ಬಹುತೇಕ ಎಲ್ಲ ಕಡೆಗಳಲ್ಲಿ ಈಗಲೂ “ಹಿಂದಿ’ ರಾರಾಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೂಂದು ಸುತ್ತಿನ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಚಿಂತನೆ ನಡೆಸಿವೆ.

Advertisement

ಹಿಂದಿ ಬಳಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ನಾಡಿನ ಜನರ ಭಾವನೆ ಮತ್ತು ಸಾಂಸ್ಕೃತಿಕ ಆಶೋತ್ತರಗಳನ್ನು ಗೌರವಿಸುವುದು ಸರ್ಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ರಾಜ್ಯದ ಅಧಿಕೃತ ಭಾಷಾ ನೀತಿ ಕನ್ನಡ ಮತ್ತು ಇಂಗ್ಲಿಷ್‌ ಅನ್ನು ಬಳಸಬೇಕು. ಹಿಂದಿ ಭಾಷೆ ಮತ್ತು ಲಿಪಿ ಬಳಕೆ ಮಾಡದೆ, ಮರುವಿನ್ಯಾಸಗೊಳಿಸಬೇಕು ಎಂದು ಮುಖ್ಯಮಂತ್ರಿ ಜುಲೈ ಕೊನೆಯ ವಾರದಲ್ಲಿ ಬಿಎಂಆರ್‌ಸಿಗೆ ಸೂಚನೆ ನೀಡಿದ್ದರು.

ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಬಳಕೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಬರೆದ ಪತ್ರದಲ್ಲೂ ಮುಖ್ಯಮಂತ್ರಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಇದುವರೆಗೆ ಮೂರ್‍ನಾಲ್ಕು ನಿಲ್ದಾಣಗಳಲ್ಲಿ ಮಾತ್ರ ಹಿಂದಿ ತೆರವಾಗಿದ್ದು, ಉಳಿದೆಡೆ ಯಥಾಸ್ಥಿತಿ ಮುಂದುವರಿದಿದೆ. 

ಎಲ್ಲೆಲ್ಲಿ ತೆರವಾಗಿದೆ?
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಕನ್ನಡಪರ ಸಂಘಟನೆಗಳ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿಯೇತರ ಫ‌ಲಕಗಳ ಮರುವಿನ್ಯಾಸಕ್ಕೆ ಬಿಎಂಆರ್‌ಸಿಗೆ ಸೂಚನೆ ನೀಡಿದ್ದರು. ಇದಾಗಿ ಒಂದು ತಿಂಗಳಾಗಿದೆ. ಈ ಅವಧಿಯಲ್ಲಿ ಕೇವಲ ಬೈಯಪ್ಪನಹಳ್ಳಿ, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ, ಚಿಕ್ಕಪೇಟೆ, ಕೆ.ಆರ್‌. ಮಾರುಕಟ್ಟೆಯ ಮೆಟ್ರೋ ನಿಲ್ದಾಣಗಳಿಗೆ ಮಾತ್ರ ಹಿಂದಿಯಿಂದ ಮುಕ್ತಿ ಸಿಕ್ಕಿದೆ. 

ಮಹಾಕವಿ ಕುವೆಂಪು ರಸ್ತೆ, ಶ್ರೀರಾಮಪುರ, ರಾಜಾಜಿನಗರ ಸೇರಿದಂತೆ ಅನೇಕ ನಿಲ್ದಾಣಗಳಲ್ಲಿ ಈಗಲೂ ಹಿಂದಿ ಎಂದಿನಂತಿದೆ. ಮುಖ್ಯಮಂತ್ರಿ ಸೂಚನೆ ನೀಡಿದ ತಕ್ಷಣ ತೋರಿದ ಉತ್ಸಾಹವನ್ನು ಈಗ ಬಿಎಂಆರ್‌ಸಿ ತೋರಿಸುತ್ತಿಲ್ಲ. ನೆಪಮಾತ್ರಕ್ಕೆ ಮೂರ್‍ನಾಲ್ಕು ನಿಲ್ದಾಣಗಳಲ್ಲಿ ಹಿಂದಿ ತೆರವು ಮಾಡಲಾಗಿದೆ. ನಂತರದಲ್ಲಿ ಅದನ್ನು ಮರೆತಂತಿದೆ. ಈ ಬಗ್ಗೆ ಕೇಳಿದರೆ, ಸ್ವಲ್ಪ ಸಮಯ ಹಿಡಿಯುತ್ತದೆ. ಹಂತ-ಹಂತವಾಗಿ ತೆರವುಗೊಳಿಸಲಾಗುವುದು ಎಂಬ ಸಮಜಾಯಿಷಿ ನೀಡಲಾಗುತ್ತದೆ.

Advertisement

ಆದರೆ ಫ‌ಲಕಗಳ ಮರುವಿನ್ಯಾಸಕ್ಕೆ ವಿಳಂಬವಾದರೂ, ಧ್ವನಿ ಆಧಾರಿತ ಹಿಂದಿ ಪ್ರಕಟಣೆಗಳನ್ನು ಕೆಲವೇ ನಿಮಿಷಗಳಲ್ಲಿ ಸ್ಥಗಿತಗೊಳಿಸಬಹುದು. ಸಾಧನದಲ್ಲಿ “ಹಿಂದಿ’ಯನ್ನು ಡಿಸೇಬಲ್‌ ಮಾಡಿದರೆ ಸಾಕು. ಆದರೆ, ಈ ನಿಟ್ಟಿನಲ್ಲಿ ನಿಗಮ ಮನಸ್ಸು ಮಾಡುತ್ತಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಬನವಾಸಿ ಬಳಗದ ಅರುಣ್‌ ಜಾವಗಲ್‌ ಆರೋಪಿಸಿದ್ದಾರೆ. 

ಕರವೇ ರಿಯಾಲಿಟಿ ಚೆಕ್‌
ಮುಖ್ಯಮಂತ್ರಿ ಸೂಚನೆ ನಂತರವೂ ಹಿಂದಿ ತೆರವು ಸಮರ್ಪಕವಾಗಿ ಆಗದಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಮೂರ್‍ನಾಲ್ಕು ದಿನಗಳಲ್ಲಿ ಆಯಾ ವಿಧಾನಸಭೆ ಕ್ಷೇತ್ರಗಳಲ್ಲಿ ಇರುವ ಕರವೇ ಕಾರ್ಯಕರ್ತರು ಎಲ್ಲ ನಿಲ್ದಾಣಗಳಿಗೆ ತೆರಳಿ, ರಿಯಾಲಿಟಿ ಚೆಕ್‌ ನಡೆಸಲಿದ್ದಾರೆ. ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಅವರ ಗಮನಕ್ಕೆತರಲಾಗುವುದು. ಇದಕ್ಕೂ ಸ್ಪಂದನೆ ದೊರೆಯದಿದ್ದರೆ ಹಿಂದಿ ವಿರುದ್ಧದ ಹೋರಾಟಕ್ಕೆ ಕರೆ ನೀಡಲಾಗುವುದು. ಒಟ್ಟಾರೆ ಸಂಪೂರ್ಣ ಹಿಂದಿ ತೆರವುಗೊಳಿಸುವವರೆಗೂ ಬಿಡುವುದಿಲ್ಲ ಎಂದು ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.  

ಹಿಂದಿ ತೆರವಾಗುವವರೆಗೂ ಬಿಡಲ್ಲ
ಸಂಪೂರ್ಣ ಹಿಂದೆ ತೆರವಾಗದಿರುವ ಕುರಿತು ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, “ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ನಾನು ಬಿಡುವುದಿಲ್ಲ. ಇದು ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಹೇರಿಕೆಗೂ ಅನ್ವಯಿಸುತ್ತದೆ. ಅದೇನೇ ಇರಲಿ, ತಾಂತ್ರಿಕ ತೊಂದರೆಗಳಿಂದ ಮೆಟ್ರೋದಲ್ಲಿನ ಹಿಂದಿ ತೆರವಿಗೆ ತಡವಾಗಿರಬಹುದು. ಹಂತ-ಹಂತವಾಗಿ ತೆರವುಗೊಳಿಸುತ್ತಾರೆ ಎಂಬ ಭರವಸೆ ಇದೆ’ ಎಂದರು.

ಈಗಾಗಲೇ ಮೆಟ್ರೋ ನಿಗಮಕ್ಕೆ ಭೇಟಿ ನೀಡಿ, ರಾಜ್ಯದ ಅಧಿಕೃತ ಭಾಷಾ ನೀತಿ ಅನ್ವಯ ಕನ್ನಡ ಮತ್ತು ಇಂಗ್ಲಿಷ್‌ ಮಾತ್ರ ಬಳಸಬೇಕು. ಹಿಂದಿಯಿಂದಮುಕ್ತಿ ನೀಡಬೇಕು. ಇಲ್ಲದಿದ್ದರೆ, ಹಕ್ಕುಚ್ಯುತಿ ಮಂಡನೆಗೆ ಶಿಫಾರಸು ಮಾಡುವುದಾಗಿಯೂ ಎಚ್ಚರಿಸಲಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ಕೂಡ ಸೂಚನೆ ನೀಡಿದ್ದಾರೆ. ಈಗ ಬಿಎಂಆರ್‌ಸಿಗೆ ಮತ್ತೆ ಎಚ್ಚರಿಕೆ ಪತ್ರ ಬರೆಯುವುದಾಗಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next