Advertisement

ಹಿಂದಿ ಭಾಷೆಯ ಗುಲಾಮಗಿರಿ‌ ಸಾಧ್ಯವಿಲ್ಲ: ಅಮಿತ್ ಶಾ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

04:23 PM Apr 08, 2022 | Team Udayavani |

ಬೆಂಗಳೂರು: ವಿವಿಧ ರಾಜ್ಯಗಳ ಜನರು ಪರಸ್ಪರ ಹಿಂದಿಯಲ್ಲಿ ಸಂವಹನ ನಡೆಸಬೇಕು, ಇಂಗ್ಲಿಷ್‌ನಲ್ಲಿ ಅಲ್ಲ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಅಮಿತ್ ಶಾ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

Advertisement

ಸಿದ್ದರಾಮಯ್ಯ ಅವರ ಟ್ವೀಟ್ ಗಳು ಇಂತಿವೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂದೆಗೆದುಕೊಳ್ಳಬೇಕು.

ತಮಿಳುನಾಡು, ಕೇರಳ,‌ ಆಂಧ್ರಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಹಿಂದಿಯನ್ನು ಅಧಿಕೃತ ಸಂಪರ್ಕಭಾಷೆಯಾಗಿ ಬಳಸುವುದಿಲ್ಲ. ಅವುಗಳ ಜೊತೆಯಲ್ಲಿ ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆಯಾಗಿದೆ.

Advertisement

ಅಮಿತ್ ಶಾ ಅವರ ತವರು ಗುಜರಾತ್ ರಾಜ್ಯದ ಮಣ್ಣಿನ‌ ಮಗನಾದ ಮಹಾತ್ಮ ಗಾಂಧೀಜಿ ಬಹು ಸಂಸ್ಕೃತಿ, ಬಹುಭಾಷೆಗಳ ಪ್ರತಿಪಾದಕರಾಗಿದ್ದರು. ಆದರೆ ಅಮಿತ್ ಶಾ ಅವರಿಗೆ ಗಾಂಧೀಜಿಯವರಿಗಿಂತ ಏಕ ಸಂಸ್ಕೃತಿ, ಏಕಭಾಷೆಯ ಪ್ರತಿಪಾದಕರಾದ ಸೂಡೊ ರಾಷ್ಟ್ರೀಯವಾದಿ ಸಾವರ್ಕರ್ ಪ್ರಿಯರಾಗಿರುವುದು ದುರಂತ.

ಗುಜರಾತಿನಿಂದ ಬಂದಿರುವ ಅಮಿತ್ ಶಾ ಅವರ ಮಾತೃಭಾಷೆ ಗುಜರಾತಿ. ಇವರು ತಮ್ಮ ಮಾತೃಭಾಷೆಯನ್ನೇ ಕಡೆಗಣಿಸಿ ಹಿಂದಿ ಭಾಷೆಯ ಗುಲಾಮಗಿರಿ‌ ಮಾಡುತ್ತಿರುವುದು ವಿಷಾದನೀಯ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವ ರೀತಿಯಲ್ಲಿ ಬಿಂಬಿಸುವ ಜೊತೆಯಲ್ಲಿ, ರಾಜ್ಯ ಭಾಷೆಗಳನ್ನು ದಮನಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದನ್ನು ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳು ಕೂಡಿ ಪ್ರತಿಭಟಿಸುವ ಕಾಲ ಸನ್ನಿಹಿತವಾಗಿದೆ.

ನಮ್ಮ ಭಾಷಾ ನಿಲುವು ಮತ್ತು ದೇಶ-ರಾಜ್ಯಗಳ ಸಂಬಂಧವನ್ನು ರಾಷ್ಟ್ರಕವಿ‌ ಕುವೆಂಪು ಅವರು ದಶಕಗಳ ಹಿಂದೆಯೇ ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ. “ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎನ್ನುವ ಕವಿ ನುಡಿಯೇ ನಮ್ಮ ಭಾಷಾ ಸಿದ್ಧಾಂತ.

ಹಿಂದಿ, ಇಂಗ್ಲೀಷ್, ತಮಿಳು,‌ ಮಲೆಯಾಳಿ, ಗುಜರಾತಿ ಸೇರಿದಂತೆ ಯಾವ ಭಾಷೆಗೂ ನಾವು ವಿರೋಧಿಗಳಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ. ಯಾವುದೇ ಒಂದು ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ.

ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಹಿಂದಿಯನ್ನು‌ ಬಳಸಬೇಕೆಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಫರ್ಮಾನು ಹೊರಡಿಸಿರುವುದು ಅತ್ಯಂತ‌ ಆಕ್ಷೇಪಾರ್ಹ ನಡವಳಿಕೆಯಾಗಿದೆ. ಒಬ್ಬ ಸ್ವಾಭಿಮಾನಿ‌ ಕನ್ನಡಿಗನಾಗಿ‌ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next