ಸೊರಬ: ಹಿಂದೂ ಸಮಾಜದೊಳಗಿನ ಜಾತಿ ವೈಷಮ್ಯ ಮತ್ತಿತರರ ಅಸಮಾನತೆಯನ್ನು ಹೋಗಲಾಡಿಸಿ ಹಿಂದೂ ಧರ್ಮದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಭವಿಷ್ಯದ ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಲು ಸಮಾಜವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಪಟ್ಟಣದಲ್ಲಿ ಮಾ. 26 ರಂದು ಹಿಂದೂ ಸಂಧ್ಯಾ ಸಂಗಮ-ಸನಾತನ ಧರ್ಮೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್ ತಿಳಿಸಿದರು.
ಪಟ್ಟಣದ ದಾನಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಪಟ್ಟಣವನ್ನು ಕೇಂದ್ರವನ್ನಾಗಿಟ್ಟುಕೊಂಡು ನಡೆಸಲಾಗುತ್ತಿದೆ. ಹಿಂದೂ ಧರ್ಮದ ಒಗ್ಗಟ್ಟಿಗೆ ಸಮಾವೇಶ ಕೊಡುಗೆ ನೀಡಲಿದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಹಿಂದೂ ಸಮಾಜ ಜಾತಿ-ಭೇದ ಮರೆತು ಒಗ್ಗಟ್ಟಾಗಬೇಕು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸೇರಿದಂತೆ ಸಂಘ-ಪರಿವಾರದಲ್ಲಿ ಜಾತಿಯ ಪರಿಕಲ್ಪನೆಯೇ ಇಲ್ಲ. ಇಲ್ಲಿ ಎಲ್ಲ ಹಿಂದೂಗಳನ್ನು ಸಮಾನತೆಯಿಂದ ಪರಿಗಣಿಸಲಾಗುತ್ತದೆ. ಹಾಗೂ ಸಂಘಟನೆಯು ಯಾವುದೇ ಪಕ್ಷದ ಮುಖವಾಣಿಯಲ್ಲ. ನಮ್ಮದು ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುವ ಸಂಘಟನೆ ಎಂದು ಸ್ಪಷ್ಟಪಡಿಸಿದರು.
ವಿಶ್ವ ಹಿಂದೂ ಪರಿಷದ್, ಬಜರಂಗದಳದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಸುಮಾರು ಮೂರು ಸಾವಿರಕ್ಕೂ ಅಧಿಕ ಜನತೆ ಸೇರುವ ನಿರೀಕ್ಷೆ ಇದ್ದು, ಅಂದು ಮಧ್ಯಾಹ್ನ 2 ಕ್ಕೆ ಪಟ್ಟಣದ ಕಾನುಕೇರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ವಿವಿಧ ವಾಧ್ಯ ಮೇಳಗಳು ಹಾಗೂ ಕಲಾತಂಡಗಳೊಂದಿಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಶ್ರೀ ಸ್ವಾಮಿ ವಿವೇಕಾನಂದ ಶಾಲೆಯ ಮುಖಾಂತರ, ಸಾಗರ ರಸ್ತೆಯ ಪಿಎಲ್‍ಡಿ ಬ್ಯಾಂಕ್ ತಲುಪಿ, ನಂತರ ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ಶ್ರೀ ರಂಗನಾಥ ದೇವಸ್ಥಾನದಿಂದ ಸಭಾ ಕಾರ್ಯಕ್ರಮ ನಡೆಯಲಿರುವ ಶ್ರೀ ಚನ್ನವೀರ ದೇಶೀಕೇಂದ್ರ ಬಾಲಿಕಾ ಪ್ರೌಢ ಶಾಲೆಯ ಆವರಣವನ್ನು ತಲುಪಲಿದೆ ಎಂದರು.
ಸಂಜೆ 6 ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಹಡಗಲಿ ಹಾಲಸ್ವಾಮೀಜಿ ಮಹಾಸಂಸ್ಥಾನ ಮಠದ ಶ್ರೀ ಅಭಿನವ ಹಾಲಸ್ವಾಮೀಜಿ, ಚಿತ್ರದುರ್ಗ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಸೂರಗುಪ್ಪೆ ಶಾಂತಿ ಯೋಗಾಶ್ರಮದ ಶ್ರೀ ರಾಜಯೋಗಿ ಮಹಾಬಲೇಶ್ವರ ಸ್ವಾಮೀಜಿ, ಲಕ್ಕವಳ್ಳಿ ಮೋಕ್ಷ ಮಂದಿರ ಜೈನ ಮಠದ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಜರಂಗದಳ ದಕ್ಷಿಣ ಪ್ರಾಂತ್ಯ ಸಂಯೋಜಕ್ ಕೆ.ಆರ್. ಸುನೀಲ್ ಕುಮಾರ್ ಕಾರ್ಕಳ ಅವರು ದಿಕ್ಸೂಚಿ ಭಾಷಣ ಮಾಡುವರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಾಸುದೇವ ಅಧ್ಯಕ್ಷತೆ ವಹಿಸುವರು ಎಂದರು.
ಮಾತೃ ಮಂಡಳಿಯ ಪ್ರಮುಖ್ ವಾಸಂತಿ ನಾವುಡಾ ಮಾತನಾಡಿ, ದೇಶಿಯ ಸಂಸ್ಕೃತಿಯಲ್ಲಿ ಪೂಜ್ಯನೀಯ ಸ್ಥಾನವನ್ನು ನೀಡಲಾಗುತ್ತದೆ. ಮಹಿಳೆಯರಿಗೆ ಗೌರವ ನೀಡುವ ನಾಡು ಸುಭೀಕ್ಷವಾಗಿರುತ್ತದೆ ಎಂದ ಅವರು, ಕಾರ್ಯಕ್ರಮಕ್ಕೆ ತಾಲೂಕಿನ ಸ್ತ್ರಿ ಶಕ್ತಿ ಸಂಘಟನೆಯವರು, ವಿವಿಧ ಮಹಿಳಾ ಸಂಘಟನೆಗಳು ಸಹ ಆಗಮಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕು ಉಪಾಧ್ಯಕ್ಷ ಹರೀಶ್ ಭಟ್, ನಗರ ಅಧ್ಯಕ್ಷ ರಾಜು ಹಿರಿಯಾವಲಿ, ನಗರ ಉಪಾಧ್ಯಕ್ಷ ಅಶೋಕ್ ಚಿಲ್ಲೂರು, ಬಜರಂಗದಳ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ತಾಲೂಕು ಸಹ ಸಂಚಾಲಕ ಲೋಕೇಶ್, ದುರ್ಗಾವಾಹಿನಿಯ ಕೃತಿಕಾ ಪುರಾಣಿಕ್, ಬಜರಂಗದಳ ಪ್ರಮುಖರಾದ ಎನ್. ರಾಘವೇಂದ್ರ ಆಚಾರ್, ಪುರಸಭೆ ಮಾಜಿ ಉಪಾಧ್ಯಕ್ಷೆ ಗೌರಮ್ಮ ಭಂಡಾರಿ ಸೇರಿದಂತೆ ಇತರರಿದ್ದರು.