ನವದೆಹಲಿ: ಭಾರತೀಯ ಜನತಾ ಪಕ್ಷದ ಹಿಮಾಚಲ್ ಪ್ರದೇಶದ ಸಂಸದ ರಾಮ್ ಸ್ವರೂಪ್ ಶರ್ಮಾ(62ವರ್ಷ) ಬುಧವಾರ (ಮಾರ್ಚ್ 17) ಸಾವನ್ನಪ್ಪಿದ್ದು, ಇದೊಂದು ಆತ್ಮಹತ್ಯೆ ಪ್ರಕರಣ ಎಂಬುದಾಗಿ ದೆಹಲಿ ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ:ದೆಹಲಿ ಜಗತ್ತಿನ ಅತಿ ಮಲಿನ ರಾಜಧಾನಿ: ಜಾಗತಿಕ ವಾಯು ಗುಣಮಟ್ಟ ವರದಿಯಲ್ಲೇನಿದೆ?
ದೆಹಲಿಯ ನಿವಾಸದಲ್ಲಿ ಶರ್ಮಾ ಅವರ ಶವ ಪತ್ತೆಯಾಗಿದ್ದು, ಸಾವಿನ ಕಾರಣ ನಿಗೂಢವಾಗಿದ್ದು, ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿರುವುದಾಗಿ ವರದಿ ತಿಳಿಸಿದೆ.
ದೆಹಲಿ ಪೊಲೀಸರ ಪ್ರಕಾರ, ಸಿಬಂದಿಯಿಂದ ದೂರವಾಣಿ ಕರೆ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ಶರ್ಮಾ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಮನೆಯ ಬಾಗಿಲು ಒಳಗಿನಿಂದ ಚಿಲಕ ಹಾಕಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಸಂಸದ ಶರ್ಮಾ ಅವರ ಮೃತ ದೇಹವನ್ನು ಮನೆಯಿಂದ ಹೊರತರಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಸಿದ್ಧತೆ ನಡೆಸಲಾಗಿದೆ. ಶರ್ಮಾ ನಿವಾಸಕ್ಕೆ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಭೇಟಿ ನೀಡಿದ್ದಾರೆ.
ಬಿಜೆಪಿ ಸಂಸದ ಸ್ವರೂಪ್ ಶರ್ಮಾ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಬಿಜೆಪಿ ಪಕ್ಷದ ಸಂಸದೀಯ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.