Advertisement

Women; ಸ್ಯಾನಿಟರಿ ಪ್ಯಾಡ್‌ಗಳ ಸಮಸ್ಯೆಯ ಬೆಟ್ಟ!

12:28 AM Oct 20, 2023 | Team Udayavani |

ಭಾರತೀಯ ಸಮಾಜದಲ್ಲಿ ಕೆಲವು ವಿಷಯಗಳ ಬಗ್ಗೆ ನಾವು ಎಂದೂ ಮುಕ್ತವಾಗಿ ಮಾತನಾಡುವುದಿಲ್ಲ. ನಮಗೆ ಅದು “ಇಶ್ಶೀ’ ಆಗಿರುತ್ತದೆ. ಹೀಗಾಗಿ ಅಂತಹ ಕೆಲವು ವಿಷಯಗಳು ಉಲ್ಬಣಿಸುವವರೆಗೂ ಗಮನಕ್ಕೆ ಬರುವುದಿಲ್ಲ. ಒಂದು ಉದಾಹರಣೆಯನ್ನು ಕೊಡುವುದಾದರೆ, ಸ್ತ್ರೀಯರ ಋತುಚಕ್ರ. ನಮ್ಮ ಮನೆಯಲ್ಲಿಯೇ ಅಮ್ಮ, ತಂಗಿ, ಪತ್ನಿ – ಎಲ್ಲರೂ ಪ್ರತೀ ತಿಂಗಳು ಒಳಗಾಗುವ ನೈಸರ್ಗಿಕ ಪ್ರಕ್ರಿಯೆ ಇದು. ಎಲ್ಲರಿಗೂ ತಿಳಿದಿರುವ ಸತ್ಯವಾದರೂ ಅದು “ಇಶ್ಶೀ.’ ಹೀಗಾಗಿಯೇ ಗರ್ಭಕೋಶ, ಸ್ತ್ರೀಜನನಾಂಗ, ಸ್ತನ ಇತ್ಯಾದಿ ಸ್ತ್ರೀ ದೇಹಾರೋಗ್ಯದ ಅನೇಕ ಸಮಸ್ಯೆಗಳು ಉಲ್ಬಣಿಸುವವರೆಗೂ ಯಾರಿಗೂ ತಿಳಿಯದೆ ಮುಚ್ಚಿಕೊಂಡೇ ಇರುತ್ತವೆ.

Advertisement

ಮಹಿಳೆಯರ ಋತುಚಕ್ರವನ್ನೇ ಗಮನಿಸೋಣ. ಕೆಲವು ದಶಕಗಳ ಹಿಂದೆ ಭಾರತೀಯ ಮಹಿಳೆಯರು ಮುಟ್ಟಿನ ದಿನಗಳಲ್ಲಿ ಹತ್ತಿಯ ಬಟ್ಟೆಗಳನ್ನು ಧರಿಸುತ್ತಿದ್ದರು. ಅವುಗಳನ್ನು ಶುಭ್ರವಾಗಿ ತೊಳೆದು ಒಣಗಿಸುವುದು, ಧರಿಸುವ ಸಂದರ್ಭದಲ್ಲಿಯ ಅನಾನುಕೂಲಗಳು ಕಿರಿಕಿರಿಯ ಸಂಗತಿಗಳೇ ಆಗಿದ್ದವು. ಆದರೆ ಈಗ ಹಾಗಿಲ್ಲ. ದೇಶದ ಕೋಟ್ಯಂತರ ಮಹಿಳೆಯರು ಬಳಸಿ ಎಸೆಯಬಲ್ಲ ಸ್ಯಾನಿಟರಿ ಪ್ಯಾಡ್‌ಗಳ ಉಪಯೋಗವನ್ನು ಪಡೆಯುತ್ತಿದ್ದಾರೆ. ಇವುಗಳು ಧರಿಸುವುದಕ್ಕೂ ಅನುಕೂಲ; ತೊಳೆದು ಮರುಬಳಸಬೇಕಾದ ರಗಳೆ ಇಲ್ಲ. ಉಪಯೋಗಿಸಿ ಎಸೆದರೆ ಆಯಿತು.

ಆದರೆ ಇದು ತ್ಯಾಜ್ಯ ವಿಲೇವಾರಿಗೆ ಎಷ್ಟು ದೊಡ್ಡ ಸಮಸ್ಯೆಯ ಬೆಟ್ಟವನ್ನು ಸೃಷ್ಟಿಸುತ್ತಿದೆ ಎಂಬ ಬಗ್ಗೆ ಚಿಂತಿಸುವವರು ಕಡಿಮೆ. ಪ್ರತೀ ಮನೆಯಲ್ಲಿ ಒಬ್ಬರೋ ಇಬ್ಬರೋ ಸ್ತ್ರೀಯರು, ಪ್ರತೀ ತಿಂಗಳು ದಿನಕ್ಕೆ ಮೂರ್ನಾಲ್ಕು ಸ್ಯಾನಿಟರಿ ಪ್ಯಾಡ್‌ಗಳನ್ನು ಉಪಯೋಗಿಸುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಒಂದು ಸಣ್ಣ ಊರು ಅಥವಾ ಪಟ್ಟಣದಲ್ಲಿ ಇಂತಹ ಒಂದು ಸಾವಿರ ಮನೆಗಳಿವೆ ಎಂದು ಭಾವಿಸಿ. ಕಸವಾಗಿ ರೂಪುಗೊಳ್ಳುವ ಸ್ಯಾನಿಟರಿ ಪ್ಯಾಡ್‌ಗಳದ್ದು “ಸಮಸ್ಯೆಯ ಬೆಟ್ಟ’ ಎಂದದ್ದು ಇದೇ ಕಾರಣಕ್ಕೆ. ದೇಶದಲ್ಲಿ ಇರುವ ಋತುಸ್ರಾವವನ್ನು ಅನುಭವಿಸುವ ಮಹಿಳೆಯರಲ್ಲಿ ಸರಿಸುಮಾರು 12.1 ಕೋಟಿ ಮಂದಿ ಅಥವಾ ಶೇ. 36ರಷ್ಟು ಮಂದಿ ಸ್ಯಾನಿಟರಿ ಪ್ಯಾಡ್‌ಗಳನ್ನು ಉಪಯೋಗಿಸುತ್ತಿದ್ದಾರೆ ಎಂದು ಒಂದು ಸಮೀಕ್ಷೆ ಹೇಳಿದೆ. ಅಂದರೆ ವಾರ್ಷಿಕವಾಗಿ 1,230 ಕೋಟಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿದಂತಾಗುತ್ತದೆ. ಇದು 1,13,000 ಟನ್‌ ತ್ಯಾಜ್ಯವನ್ನು ಸೃಷ್ಟಿಸುತ್ತದೆ.

ಈಗ ಮಾರುಕಟ್ಟೆಯಲ್ಲಿ ಸಿಗುವ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್‌ ಇದೆ. ಇದು ಸ್ವಾಭಾವಿಕವಾಗಿ ಕರಗುವಂಥದ್ದಲ್ಲ. ಸಮಸ್ಯೆಗೆ ಕಾರಣ ಇದುವೇ. ಪ್ರತೀ ತಿಂಗಳು ಎಲ್ಲ ಮನೆಗಳಿಂದ ಒಟ್ಟಾಗಿ ಹೊರಡುವ ಈ ತ್ಯಾಜ್ಯ ಬೃಹತ್‌ ಸ್ವರೂಪವನ್ನು ತಾಳಿ ಪ್ರತೀ ನಗರ, ಪಟ್ಟಣದ ಹೊರಭಾಗದಲ್ಲಿ ಎಲ್ಲೋ ಒಂದು ಕಡೆ ಇರುವ ಡಂಪಿಂಗ್‌ ಯಾರ್ಡ್‌ ಸೇರಿಕೊಳ್ಳುತ್ತದೆ. ತಿಂಗಳು ತಿಂಗಳು ಈ ಬೆಟ್ಟ ಎತ್ತರಿಸುತ್ತ ಹೋಗುತ್ತದೆ.

ಈ ಸ್ಯಾನಿಟರಿ ಪ್ಯಾಡ್‌ ಸಮಸ್ಯೆ ಬೆಟ್ಟದಾಕಾರ ತಾಳಲು ಒಂದು ಕಾರಣ ಸ್ಥಳೀಯಾಡಳಿತಗಳಲ್ಲಿ ದಹನಯಂತ್ರಗಳು ಅಥವಾ ಇನ್ಸಿನರೇಟರ್‌ಗಳು ಇಲ್ಲದಿರುವುದು. ಕೆಲವು ಶಾಲೆಗಳು, ವಿಮಾನನಿಲ್ದಾಣಗಳು, ಮಾಲ್‌ಗ‌ಳಲ್ಲಿ ಮಾತ್ರ ದಹನಯಂತ್ರಗಳಿವೆ. 2016ರ ಘನ ತ್ಯಾಜ್ಯ ನಿರ್ವಹಣ ನಿಯಮಗಳ ಪ್ರಕಾರ ಸ್ಯಾನಿಟರಿ ಪ್ಯಾಡ್‌ಗಳಂತಹ ಶೌಚ ತ್ಯಾಜ್ಯಗಳನ್ನು ಸಂಗ್ರಹಿಸಿ ಬಯೋಮೆಡಿಕಲ್‌ ತ್ಯಾಜ್ಯ ದಹನಯಂತ್ರಗಳಲ್ಲಿ ವಿಲೇವಾರಿ ಮಾಡಬೇಕಿದೆ. ಆದರೆ ದೇಶದಲ್ಲಿ ಇಂತಹ ದಹನಯಂತ್ರಗಳು ಇರುವುದು ಕೆಲವು ನೂರು ಮಾತ್ರ. ಸಣ್ಣ ಪ್ರಮಾಣದ ದಹನಯಂತ್ರಗಳಿವೆ. ಆದರೆ ಇವುಗಳಲ್ಲಿ ಇಂತಹ ತ್ಯಾಜ್ಯ ಸರಿಯಾಗಿ ಉರಿಯದೆ ಪ್ಲಾಸ್ಟಿಕ್‌ ಹೊಗೆ ವಾತಾವರಣವನ್ನು ಸೇರುವಂತಹ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದು ನಗರ-ಪಟ್ಟಣಗಳ ಮಾತಾಯಿತು. ಹಳ್ಳಿಗಳಲ್ಲಿ ಇಂತಹ ಸ್ಯಾನಿಟರಿ ಪ್ಯಾಡ್‌ಗಳು ಜಲಮೂಲಗಳನ್ನು ಸೇರುತ್ತವೆ. ಇದರಿಂದ ಇನ್ನೊಂದು ಬಗೆಯ ಸಮಸ್ಯೆ. ಬಹಿರಂಗವಾಗಿ ಸುಡುವುದು, ಶೌಚಾಲಯದಲ್ಲಿ ಫ್ಲಶ್‌ ಮಾಡಿಬಿಡುವುದು ಹಳ್ಳಿ-ಪಟ್ಟಣ ಎರಡೂ ಕಡೆ ಇರುವ ಸಮಸ್ಯಾತ್ಮಕ ವಿಲೇವಾರಿ ಕ್ರಮ.

Advertisement

ಈ ಸಮಸ್ಯೆಯ ಪರಿಹಾರಕ್ಕೆ ಎರಡು ರೀತಿಯ ಕಾರ್ಯವಿಧಾನಗಳ ಅಗತ್ಯ ಇದೆ. ನಿಸರ್ಗದಲ್ಲಿ ಸಹಜವಾಗಿ ಕರಗಬಲ್ಲ ಸಾವಯವ ವಸ್ತುಗಳಿಂದ ಸ್ಯಾನಿಟರಿ ಪ್ಯಾಡ್‌ ತಯಾರಿ ಒಂದನೆಯದಾದರೆ ಸರಿಯಾದ ಕ್ರಮದಲ್ಲಿ ತ್ಯಾಜ್ಯ ವಿಲೇವಾರಿ ಇನ್ನೊಂದು. ಅಲ್ಲಲ್ಲಿ ಕೆಲವು ಉತ್ಸಾಹಿಗಳು ಸ್ಟಾರ್ಟ್‌ಅಪ್‌ಗ್ಳ ಮೂಲಕ ಸಾವಯವ ವಸ್ತುಗಳಿಂದ ಸ್ಯಾನಿಟರಿ ಪ್ಯಾಡ್‌ ತಯಾರಿಸಿದ್ದುಂಟು. ಆದರೆ ಬೇಡಿಕೆ-ಬಳಕೆಯ ಅಗಾಧ ಪ್ರಮಾಣವನ್ನು ಲಕ್ಷಿಸಿ ಹೇಳುವುದಾದರೆ ಇದು ಒಬ್ಬ ವ್ಯಕ್ತಿ, ಒಂದು ಸ್ಟಾರ್ಟ್‌ಅಪ್‌ನಿಂದ ಆಗುವ ಕಾರ್ಯವಲ್ಲ. ಈಗಾಗಲೇ ಸ್ಯಾನಿಟರಿ ಪ್ಯಾಡ್‌ ತಯಾರಿಸುತ್ತಿರುವ ಬೃಹತ್‌ ಕಂಪೆನಿಗಳು ಈ ನಿಟ್ಟಿನಲ್ಲಿ ಸಂಶೋಧನೆ-ಅಭಿವೃದ್ದಿ ಕಾರ್ಯದಲ್ಲಿ ತೊಡಗಬೇಕು. ಸರಕಾರವೂ ಘನತ್ಯಾಜ್ಯ ವಿಲೇವಾರಿಯ ನಿಯಮಗಳನ್ನು ಪರಿಷ್ಕರಿಸಿ ಕಟ್ಟುನಿಟ್ಟುಗೊಳಿಸಬೇಕು.

ಋತುಸ್ರಾವಕ್ಕೆ ಒಳಗಾಗುತ್ತಿರುವ ಪ್ರತೀ ಮಹಿಳೆ, ಪ್ರತೀ ತಿಂಗಳು ತಾನು ಉಪಯೋಗಿಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಪ್ರತ್ಯೇಕವಾಗಿ ಕಸ ಸಾಗಿಸುವವರಿಗೆ ಹಸ್ತಾಂತರಿಸುವುದು ವೈಯಕ್ತಿಕ ಮಟ್ಟದಲ್ಲಿ ಆಗಬೇಕಾದ ಕಾರ್ಯ. ಇಂತಹ ಸಂದರ್ಭದಲ್ಲಿ ಎದುರಾಗಬಹುದಾದ ಮುಜುಗರದಾಯಕ ಸನ್ನಿವೇಶಗಳನ್ನು ಇಲ್ಲವಾಗಿಸಲು ಸ್ವತ್ಛತಾ ಸಿಬಂದಿಗೂ ತಿಳಿವಳಿಕೆ ಒದಗಿಸುವ, ಅರಿವು ಮೂಡಿಸುವ ಕಾರ್ಯ ಆಯಾ ಸ್ಥಳೀಯ ಮಟ್ಟದಲ್ಲಿ ನಡೆಯಬೇಕು.

ಸತ್ಯ

Advertisement

Udayavani is now on Telegram. Click here to join our channel and stay updated with the latest news.

Next