ಚಿಕ್ಕಮಗಳೂರು: ಜಿಲ್ಲೆ ಪ್ರಕೃತಿ ಸೌಂದರ್ಯವನ್ನು ಹೊಂದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ದೇಶ- ವಿದೇಶ, ರಾಜ್ಯ ಹಾಗೂ ಹೊರರಾಜ್ಯಗಳಿಂದ ಇಲ್ಲಿಗೆ ಬರುವ ಪ್ರವಾಸಿಗರು ಪ್ರವಾಸಿ ತಾಣಗಳಲ್ಲಿ ಅನುಪಯುಕ್ತ ತ್ಯಾಜ್ಯವನ್ನು ಎಲ್ಲೆಂದರದಲ್ಲಿ ಎಸೆದು ಪರಿಸರವನ್ನು ಹಾಳುಗೆಡುವುತ್ತಿದ್ದು, ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎಂ.ಎಚ್. ಅಕ್ಷಯ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಗಿರಿ ಸ್ವತ್ಛತಾ ಅಭಿಯಾನಕ್ಕೆ ನಗರದ ಟೌನ್ ಕ್ಯಾಂಟೀನ್ ಮುಂಭಾಗದಲ್ಲಿ ಹಸಿರುವ ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಶ್ಚಿಮ ಘಟ್ಟ ಪ್ರದೇಶ, ಗಿರಿಶಿಖರ, ವನ್ಯಜೀವಿ ಸಂಕುಲ ಸೇರಿದಂತೆ ನೈಸರ್ಗಿಕವಾಗಿ ಅತ್ಯಂತ ಸುಂದರ ಜಿಲ್ಲೆಯಾಗಿದ್ದು, ವರ್ಷವಿಡೀ ಸಾವಿರಾರು ಪ್ರವಾಸಿಗರು ಇಲ್ಲಿಗೆ ನಿತ್ಯ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ. ಪ್ರವಾಸಿಗರು ಹಾಗೂ ಸ್ಥಳೀಯರು ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಜೊತೆ ತಂದ ತಿಂಡಿ ತಿನಿಸು, ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಇದರಿಂದ ಪರಿಸರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಗಿರಿ ಪ್ರದೇಶದಲ್ಲಿ ಸ್ವತ್ಛತಾ ಅಭಿಯಾನ ಆಯೋಜಿಸಲಾಗಿದೆ. ಸುಂದರವಾದ ಪ್ರಕೃತಿಯನ್ನು ಸ್ವತ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಅಭಿಯಾನದ ಮೂಲಕ ಸ್ವತ್ಛತೆ ಬಗ್ಗೆ ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಭಿಯಾನದಂತಹ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಲಿದ್ದು, ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಂಡು ಪ್ರವಾಸಿ ತಾಣಗಲ್ಲಿ ಸ್ವತ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಮುಂದಿನ ನಮ್ಮ ತಲೆಮಾರಿಗೆ ಈ ಪ್ರಕೃತಿ ಸೌಂದರ್ಯವನ್ನು ಕೊಡುಗೆಯಾಗಿ ನೀಡಬೇಕು ಎಂದರು.
ನಗರಸಭೆ ಪೌರಾಯುಕ್ತ ಎಂ.ಸಿ. ಬಸವರಾಜ್ ಮಾತನಾಡಿ, ಜಿಲ್ಲೆಯು ಅದ್ಭುತ ಪ್ರವಾಸಿ ತಾಣಗಳನ್ನು ಹೊಂದಿದ್ದು ತನ್ನದೇ ಆದ ನೈಸರ್ಗಿಕ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮೊಟ್ಟಿಗೆ ತಂದಿರುವ ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಇಲ್ಲಿಯ ಪ್ರಕೃತಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಪ್ರವಾಸಿಗರು ಮತ್ತು ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ ಎಂದರು.
ಜಿಲ್ಲಾಡಳಿತದಿಂದ ಆಯೋಜಿಸಿರುವ ಗಿರಿ ಪ್ರದೇಶ ಸ್ವತ್ಛತಾ ಅಭಿಯಾನವು ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿಸಿದ್ದು ಜನತೆಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಈ ಸ್ವತ್ಛತಾ ಅಭಿಯಾನ ಬೃಹತ್ ಮಟ್ಟದಲ್ಲಿ ಆಯೋಜಿಸುವ ಮೂಲಕ ಇನಷ್ಟು ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅರಣ್ಯ ಸಂರಕ್ಷಣಾ ಅಧಿ ಕಾರಿ ಸುನೀಲ್ ಪನ್ವಾರ್, ಅರಣ್ಯ ಇಲಾಖೆ ಉಪ ಅರಣ್ಯ ಅಧಿಕಾರಿ ಜಗನ್ನಾಥ್, ಪ್ರಾದೇಶಿಕ ಸಾರಿಗೆ ಅ ಧಿಕಾರಿ ಮುರುಗೇಂದ್ರ ಶಿರೋಳ್ಕರ್ ಸೇರಿದಂತೆ ವಿವಿಧ ಇಲಾಖೆಯ ಅ ಧಿಕಾರಿಗಳು ಹಾಗೂ ಸಂಘ ಸಂಸ್ಥೆಯ ಸ್ವಯಂ ಸೇವಕರು ಇದ್ದರು.
ಕಾರ್ಯಕ್ರಮದ ಬಳಿಕ ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಗಿರಿ ಪ್ರದೇಶದಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಎಲ್ಲೆಂದರಲ್ಲಿ ಬಿಸಾಡಿರುವ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸ್ವತ್ಛಗೊಳಿಸಿತು.