Advertisement

ಹೈಕ ಸಾಂಸ್ಕೃತಿಕ-ಕಲೆ ಬೆಳವಣಿಗೆಗೆ ಯತ್ನ

11:11 AM Aug 27, 2017 | Team Udayavani |

ಕಲಬುರಗಿ: ಸಾಮಾಜಿಕ, ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಇತಿಹಾಸ ಹೊಂದಿದ ಈ ನೆಲದ ಪ್ರತಿಭಾ ಸಂಪತ್ತು, ಸಾಂಸ್ಕೃತಿಕ ಶ್ರೀಮಂತಿಕೆ ಬಲಗೊಳ್ಳಲು ಸಾಧ್ಯವಾದ ಮಟ್ಟಿಗೆ ಶ್ರಮಿಸುವುದಾಗಿ ವಿವಿಧ ಅಕಾಡೆಮಿಗಳಿಗೆ ನೇಮಕಗೊಂಡ ನೂತನ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ನಗರದ ವಿಕಾಸ ಅಕಾಡೆಮಿ ಕಾರ್ಯಾಲಯದ ಪ್ರಾಂಗಣದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನವು ಗುಲಬರ್ಗಾ ಮಹಿಳಾ ಕಮ್ಯುನಿಟಿ ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯೆ ಗಾಯತ್ರಿ ಎ. ಶಿಲ್ಪಿ ಮಾತನಾಡಿ, ಯುವ ಕಲಾವಿದರ ಬೆಳವಣಿಗೆಗೆ ಪ್ರಮುಖ ಯೋಜನೆ ರೂಪಿಸಿ, ಯುವಕರಲ್ಲಿನ ಪ್ರತಿಭೆಗೆ ಅನುಗುಣವಾಗಿ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂದೀಪ ಬಿ.ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಹಿತ್ಯ ಕೃತಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬಿಡುವಿನ ವೇಳೆ ಲೈವ್‌ ಬ್ಯಾಂಡ್‌, ಇಂಟರನೆಟ್‌, ಚಾಟಿಂಗ್‌ ಮುಂತಾದ
ಹವ್ಯಾಸಗಳಿಗೆ ಬಲಿಯಾಗದೆ ಉತ್ತಮ ಪುಸ್ತಕಗಳೊಂದಿಗೆ ಗೆಳೆತನ ಬೆಳೆಸಿಕೊಂಡರೆ ಬದುಕು ಉತ್ತಮವಾಗುತ್ತದೆ ಎಂದರು. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ಸದಸ್ಯ ಶಿವಣ್ಣ ಹೂಗಾರ ದೇಸಾಯಿ ಕಲ್ಲೂರ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ನಿಂಗಣ್ಣ ಕೇರಿ ಮಾತನಾಡಿದರು.
ಕನಕಶ್ರೀ ಪ್ರಶಸ್ತಿ ಪುರಸ್ಕೃತರು ಆದ ಹಿರಿಯ ಸಾಹಿತಿ ಡಾ| ಸ್ವಾಮಿರಾವ್‌ ಕುಲಕರ್ಣಿ ಸಂವಾದ ಉದ್ಘಾಟಿಸಿ, ದಕ್ಷಿಣ ಕರ್ನಾಟಕದವರ ಕಣ್ಣಲ್ಲಿ ನಾವು ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣುತ್ತಿದ್ದೇವೆ. ಈ ಭಾಗದ ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ನಾಡಿಗೆ ಪರಿಚಯಿಸುವ ಕಾರ್ಯ ಇನ್ನೂ ಆಗಬೇಕಿದೆ ಎಂದು ನುಡಿದರು. ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ವಿಕಾಸ ಅಕಾಡೆಮಿ ವಿಶ್ವಸ್ಥ ಮಾರ್ತಾಂಡ ಶಾಸ್ತ್ರೀ ಮಾತನಾಡಿದರು. ಮನಿಷಾ ಮಹಿಳಾ ಕಲ್ಯಾಣ ಸಂಸ್ಥೆ ಕಾರ್ಯದರ್ಶಿ ಮುಕ್ತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next