ವಿಜಯಪುರ: ಯುಗಾದಿ ಹಬ್ಬಕ್ಕಾಗಿ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಬರುವ ಕರ್ನಾಟಕದ ಪಾದಯಾತ್ರಿಗಳು ಗಂಟಲು ದ್ರವ ಮಾದರಿ ಪರೀಕ್ಷಿಸಿಕೊಂಡು, ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ತರುವುದು ಕಡ್ಡಾಯ ಎಂದು ಆಂಧ್ರಪ್ರದೇಶ ಸರ್ಕಾರದ ಶ್ರೀಶೈಲಂ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ.ಎಸ್. ರಾಮರಾವ್ ಹೇಳಿದರು.
ಸೋಮವಾರ ವಿಜಯಪುರ ನಗರದ ಎಪಿಎಂಸಿ ಮಚಂìಟ್ ಅಸೋಸಿಯೇಶನ್‌ನ ನೀಲಕಂಠೇಶ್ವರ ಮಂಗಲ ಭವನದಲ್ಲಿ ನಡೆದ ಶ್ರೀಶೈಲ ಪಾದಯಾತ್ರಿ ಭಕ್ತರು, ದಾಸೋಹಿಗಳ ಸಭೆ, ಭ್ರಮರಾಂಬಿಕಾ-ಮಲ್ಲಿಕಾರ್ಜುನ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಈ ಸೂಚನೆ ನೀಡಿದರು.
ಯುಗಾದಿ ಹಬ್ಬದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಲಕ್ಷಾಂತತರ ಭಕ್ತರು ಶ್ರೀಶೈಲ ಕ್ಷೇತ್ರಕ್ಕೆ ಭೇಟಿ ನೀಡುತ್ತೀರಿ, ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕವೂ ಶ್ರೀಕ್ಷೇತ್ರ ದರ್ಶನಕ್ಕೆ ಬರುತ್ತೀರಿ. ಪ್ರತಿ ವರ್ಷದಂತೆ ಈ ವರ್ಷ ಮುಕ್ತ ಪ್ರವೇಶ ನೀಡುವುದಿಲ್ಲ. ಕ್ಷೇತ್ರಕ್ಕೆ ಬರುವಾಗ ಕೋವಿಡ್-19 ರೋಗ ಇಲ್ಲ ಎಂಬುದಕ್ಕೆ ಆರೋಗ್ಯ ಪರೀಕ್ಷೆಯ ಪ್ರಮಾಣ ಪತ್ರ ತರುವುದು ಕಡ್ಡಾಯ ಎಂದರು.
ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೊರೊನಾ ನಿಗ್ರಹಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿಭಾಯಿಸಬೇಕು. ಈ ವಿಷಯದಲ್ಲಿ ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯ ಸರಕಾರಗಳು ರೂಪಿಸಿರುವ ಮುಂಜಾಗೃತಾ ನಿಯಮಗಳ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಭಕ್ತರಿಗೆ ಸೂಚಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಪೀಠದ ಚನ್ನಸಿದ್ದರಾಮೇಶ್ವರ ಪಂಡಿತರಾಧ್ಯ ಶ್ರೀಗಳು ಮಾತನಾಡಿ, ಯುಗಾದಿ ಹಬ್ಬದಲ್ಲಿ ಭಕ್ತ ಸಮೂಹ ಶ್ರೀಶೈಲದಲ್ಲಿ ಹೆಚ್ಚಾಗುವುದರಿಂದ ದೇಶದ ಅನೇಕ ಭಾಗಗಳಿಂದ ಭಕ್ತಾದಿಗಳು ಬರುತ್ತಾರೆ. ಕೋವಿಡ್-19 ಹೆಚ್ಚಾಗುತ್ತಿರುವ ಕಾರಣ ನಿಮ್ಮ ಆರೋಗ್ಯ ಹಿತದೃಷ್ಟಿಯಿಂದ ಸರಕಾರದ ನಿಯಮಾವಳಿಗಳನ್ನು ಪಾಲಿಸಬೇಕು. ಕ್ಷೇತ್ರಕ್ಕೆ ಆಗಮಿಸುವ ಪಾದಯಾತ್ರಿಕರಿಗೆ ಭೀಮನಕೊಳ್ಳದಲ್ಲಿ ದೇವರ ದರ್ಶನಕ್ಕೆ ಒಂದು ಗುರುತಿನ ಮುದ್ರೆಯನ್ನು ಕೊಡಲಾಗುವುದು ಕ್ಷೇತ್ರದಲ್ಲಿ ಪ್ರತಿಯೊಬ್ಬರು ಸ್ವತ್ಛತೆ ಶಿಸ್ತು ವಹಿಸಬೇಕೆಂದು ತಿಳಿಸಿದರು. ಅರ್ಚಕರಾದ ಜಿ.ವೀರಭದ್ರಯ್ಯ, ರಮೇಶ ಬಿದನೂರ, ರವೀಂದ್ರ ಬಿಜ್ಜರಗಿ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.