Advertisement

ಕೇರಳದ ಜನಸುರಕ್ಷಾ ಯಾತ್ರೆ ಬೆಂಬಲಿಸಿ ಪಾದಯಾತ್ರೆ:ಬಂಧನ, ಬಿಡುಗಡೆ

10:37 AM Oct 10, 2017 | Team Udayavani |

ಬೆಂಗಳೂರು: ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆ ವಿರೋಧಿಸಿ ಬಿಜೆಪಿ ಕೇರಳದಲ್ಲಿ ಹಮ್ಮಿ ಕೊಂಡಿರುವ ಜನ ಸುರಕ್ಷಾ ಯಾತ್ರೆ ಬೆಂಬಲಿಸಿ ರಾಜಧಾನಿ ಬೆಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಪಾದಯಾತ್ರೆ ನಡೆ ಸಿದ ಬಿಜೆಪಿ, ಸಿಪಿಎಂ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿತು. ನಗರದ ಲಾಲ್‌ಬಾಗ್‌ ವೃತ್ತದಿಂದ ಬಸವನಗುಡಿ
ಯಲ್ಲಿರುವ ಸಿಪಿಎಂ ಕಚೇರಿಗೆ ಮುತ್ತಿಗೆ ಹಾಕಲು ಪಾದಯಾತ್ರೆಯಲ್ಲಿ ಹೊರಟಿದ್ದ ಬಿ.ಎಸ್‌.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಮುಖಂಡರನ್ನು ಮಾರ್ಗಮಧ್ಯೆ ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದರು.

Advertisement

ರಾಜ್ಯದಲ್ಲೂ ಸರಣಿ ಹತ್ಯೆ: ದಯಾತ್ರೆ ನೇತೃತ್ವ ವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ರಾಜ್ಯದಲ್ಲೂ ಇದೇರೀತಿ ಹಿಂದೂಗಳ ಹತ್ಯೆ ಸರಣಿ ಆರಂಭವಾಗಿದ್ದು, ಅದರ ವಿರುದ್ಧವೂ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಕಮ್ಯುನಿಸ್ಟರ ದೌರ್ಜನ್ಯಕ್ಕೆ ಹೆದರಬೇಡಿ: ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಮ್ಯುನಿಸ್ಟ್‌ ಕಾರ್ಯಕರ್ತರ ದೌರ್ಜನ್ಯಕ್ಕೆ ಕೇರಳಿಗರು ಹೆದರಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು. ಲಾಲ್‌ಬಾಗ್‌ನಿಂದ ಹೊರಟ ಪಾದಯಾತ್ರೆ ಬಸವನ ಗುಡಿ ಸಮೀಪ ಬರುತ್ತಿದ್ದಂತೆ ಪೊಲೀಸರು ಅವರನ್ನು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆದು ಗೊಂದಲ ಸೃಷ್ಟಿಯಾಯಿತು. ಇದರ ನಡುವೆಯೇ
ಮುಖಂಡರನ್ನು ಬಂಧಿಸಿ ವಾಹನ ಗಳಲ್ಲಿ ಅಲ್ಲಿಂದ ಕರೆದೊಯ್ದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.

ಕೇರಳ ಸಿಎಂಗೂ, ರಾಜ್ಯದ ಸಿಎಂಗೂ ವ್ಯತ್ಯಾಸವಿಲ್ಲ
ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಮಾದರಿಯಲ್ಲಿ ಕರ್ನಾಟಕದಲ್ಲೂ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗಳು ನಡೆಯುತ್ತಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಈ ವಿಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ. ಪಾದಯಾತ್ರೆ ವೇಳೆ ಮಾತನಾಡಿದ ಅವರು, ಕೇರಳದಲ್ಲಿ ಮುಖ್ಯಮಂತ್ರಿಯವರ ಕಣ್ಮುಂದೆಯೇ 150ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳು ನಡೆದಿದೆ. ಅದೇ ರೀತಿಯ ಹತ್ಯೆಗಳು ರಾಜ್ಯದಲ್ಲೂ ನಡೆಯುತ್ತಿದ್ದು, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ಕಿಡಿ ಕಾರಿದರು. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೂ ಇದೇ ರೀತಿ ಹೋರಾಟ ನಡೆಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next