Advertisement
ಹಿಜಾಬ್‌ಗ ಅವಕಾಶ ನೀಡದೇ ಇದ್ದುದರಿಂದ ನ್ಯಾಯಾಲಯದ ಮೆಟ್ಟಿಲೇರಿರುವ ಆರು ವಿದ್ಯಾರ್ಥಿನಿಯರ ಸಹಿತವಾಗಿ ಕೆಲವು ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿರಲಿಲ್ಲ.ಜಿಲ್ಲಾಧಿಕಾರಿ ಕೂರ್ಮಾ ರಾವ್ ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು.
ನ್ಯಾಯಾಲಯದ ತೀರ್ಪನ್ನೇ ಪ್ರಶ್ನಿಸುತ್ತಿರುವ ವಿದ್ಯಾರ್ಥಿನಿಯರು ಈ ದೇಶದಲ್ಲಿ ಉಳಿಯಲು ಅರ್ಹರಲ್ಲ. ಅವರ ಧರ್ಮಪಾಲನೆ ಮಾಡುವ ದೇಶಗಳಿಗೆ ಹೋಗಲಿ ಎಂದು ಉಡುಪಿ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಹಿಜಾಬ್ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ಗೆ ಹಾಕಿದರೂ ತೀರ್ಪು ನಮ್ಮ ಪರವಾಗಿಯೇ ಬರುವ ವಿಶ್ವಾಸವಿದೆ ಎಂದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಸರಿ ಶಾಲಿನ ಪ್ರಭಾವ ಏನು ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸಲಿದ್ದೇವೆ ಎಂದರು.
ಧಾರ್ಮಿಕ, ಶೈಕ್ಷಣಿಕ ಹಕ್ಕಿಗೆ ಧಕ್ಕೆನ್ಯಾಯಾಲಯದ ತೀರ್ಪಿನಿಂದ ಮುಸ್ಲಿಂ ಹೆಣ್ಣು ಮಕ್ಕಳ ಧಾರ್ಮಿಕ ಹಕ್ಕಿನ ಜತೆಗೆ ಶೈಕ್ಷಣಿಕ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಮುಂದಿನ ತಲೆಮಾರು ಸುಶಿಕ್ಷಿತರನ್ನಾಗಿಸುವುದಕ್ಕಿಂತ ಸಮವಸ್ತ್ರವೇ ಮುಖ್ಯ ಎಂಬ ಸಂದೇಶವನ್ನು ನ್ಯಾಯಾಲಯ ನೀಡಿರುವುದು ಅಸಮಾಧಾನ ತಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಲ್ಪೆ ಜಾಮೀಯಾ ಮಸೀದಿಯ ಇಮಾಮರಾದ ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಹೇಳಿದ್ದಾರೆ. ಕುರಾನ್‌ನ 33ನೇ ಅಧ್ಯಾಯದ 59ನೇ ಸೂಕ್ತದಲ್ಲಿ ಹಿಜಾಬ್ ಧರಿಸುವ ಬಗ್ಗೆ ಸ್ಪಷ್ಟ ಸಂದೇಶವಿದೆ. ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಿದ್ದೇವೆ ಎಂದರು. ಧಾರ್ಮಿಕ ಆಚರಣೆ ಮುಖ್ಯ. ಅದನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ ಪರೀಕ್ಷೆಗೆ ಇನ್ನೂ 15ಕ್ಕೂ ಹೆಚ್ಚುದಿನ ಇರುವುದರಿಂದ ಆ ಬಗ್ಗೆ ಎಲ್ಲರೂ ಸೇರಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸಮ್ಮಾನ್ ಕೌನ್ಸೆಲಿಂಗ್ ಸೆಂಟರ್‌ನ ಮುಖ್ಯಸ್ಥ ಮೌಲಾನ ಅಬ್ದುಲ್ಲತೀಫ್ ಮದನಿ ಹೇಳಿದರು. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಉಡುಪಿ ಜಾಮೀಯ ಮಸೀದಿಯ ಇಮಾಮರಾದ ಮೌಲಾನಾ ರಶೀದ್ ಅಹ್ಮದ್ ಉಮರಿ, ಇಂದ್ರಾಳಿ ನೂರಾನಿ ಮಸೀದಿಯ ಇಮಾಮರಾದ ಮೌಲಾನಾ ಮಸೀಹುಲ್ಲಾ ಖಾನ್ ಕಾಸ್ಮಿà, ಮೂಳುರಿನ ಹೈದರಲಿ ಅಹ್ಸಾನಿ ಮುಸ್ಲಿಯಾರ್, ಸಂಯುಕ್ತ ಜಮಾಅತ್ ಕಾರ್ಯದರ್ಶಿ ಹಾಜಿ ಎಂ.ಎ. ನಾವು ಮೂಳೂರು, ಮೌಲಾನಾ ಝಮೀರ್ ಅಹ್ಮದ್ ರಶಾದಿ, ಮೌಲಾನಾ ಜಾವೇದ್ ಕಾಸ್ಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಹಕ್ಕಿನಿಂದ ವಂಚಿತರಾಗಬಾರದು
ಒಂದು ಸಮುದಾಯದ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರ ಹಾಗೂ ಷಡ್ಯಂತ್ರ ನಡೆಯುತ್ತಿದೆ. ಯಾರನ್ನೂ ಶಿಕ್ಷಣದಿಂದ ವಂಚಿತರನ್ನಾಗಿಸುವುದು ಸರಿಯಲ್ಲ.ನ್ಯಾಯಾಲಯ ತೀರ್ಪಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸುಪ್ರೀಂ ಕೋರ್ಟ್‌ಗೆ ಹೋಗುವ ಬಗ್ಗೆಯೂ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಿಜಾಬ್ ಧರಿಸಿಯೇ ಬಂದು,
ಮರಳಿದ ವಿದ್ಯಾರ್ಥಿನಿಯರು
ಕಾಪು: ಹೈಕೋರ್ಟ್ ಆದೇಶದ ಬಳಿಕವೂ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರಿದಿದೆ. 9 ವಿದ್ಯಾರ್ಥಿನಿಯರು ಬುಧವಾರವೂ ಹಿಜಾಬ್ ಧರಿಸಿಕೊಂಡು ಆಗಮಿಸಿದ್ದು ಹಿಜಾಬ್ ಸಹಿತ ತರಗತಿ ಪ್ರವೇಶಿಸಲು ಅವಕಾಶ ವಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದಾಗ ವಾಪಸಾದರು.14 ಮುಸ್ಲಿಂ ವಿದ್ಯಾರ್ಥಿನಿಯರಿದ್ದು ಇಬ್ಬರು ಹಿಜಾಬ್ ತೆಗೆದಿರಿಸಿ ಪರೀಕ್ಷೆಗೆ ಹಾಜರಾಗಿದ್ದರು. ಹಿಜಾಬ್ ವಿವಾದದ ಬಳಿಕ ಮೂವರು ಕಾಲೇಜಿಗೆ ಬರುವುದನ್ನೇ ನಿಲ್ಲಿಸಿದ್ದಾರೆ. ತೀರ್ಪು ಒಪ್ಪಲು ಅಸಾಧ್ಯ: ಫೈಝಿ
ಮಂಗಳೂರು: ಹಿಜಾಬ್ ನಿಷೇಧ ತೀರ್ಪು ಅಸಾಂವಿಧಾನಿಕ. ಇಲ್ಲಿ ಹೈಕೋರ್ಟ್ ಇಸ್ಲಾಮಿಕ್ ಕಾನೂನನ್ನು ತಪ್ಪಾಗಿ ವ್ಯಾಖ್ಯಾನಿಸಿದೆ. ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಷ್ಟ್ರೀಯ ಸಮಿತಿಯ ಸದಸ್ಯ ಜಾಫರ್ ಸಾದಿಕ್ ಫೈಝಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದು ಜಾತ್ಯ ತೀತ ಆತ್ಮಸಾಕ್ಷಿಗೆ ನೋವು ನೀಡುವ ಆಘಾತಕಾರಿ ವಿಷಯ. ಅಂತೆಯೇ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ದೂರವಿಡಲು ನಡೆಸಿದ ಷಡ್ಯಂತ್ರ ಎಂದರು. ಗುರುವಾರದ ಬಂದ್‌ಗೆ ಬೆಂಬಲ ಸೂಚಿಸಿದರು. ಗುರುವಾರ ಬಂದ್‌ಗೆ ಬೆಂಬಲ
ಮಂಗಳೂರು/ಉಡುಪಿ: ಹಿಜಾಬ್ ವಿಷಯದಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಮುಸ್ಲಿಂ ಸಂಘಟನೆ ಗಳು ನೀಡಿರುವ ಮಾ. 17ರ ಬಂದ್ ಕರೆಗೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮತ್ತು ಎಸ್‌ಡಿಪಿಐ ಸಂಘಟನೆ ಬೆಂಬಲ ಸೂಚಿಸಿವೆೆ. ಸಮುದಾಯ ಬಾಂಧವರು ತಮ್ಮ ವ್ಯಾಪಾರ ವಹಿವಾಟುಗಳನ್ನು ಮುಚ್ಚಿ ಬಂದ್ ಬೆಂಬಲಿಸುವಂತೆ ವಿನಂತಿಸಲಾಗಿದೆ. ಬಂದ್ ಶಾಂತಿ ಪೂರ್ಣವಾಗಿರಲಿ, ಯಾರನ್ನೂ ಒತ್ತಾಯಿಸುವುದು ಬೇಡ ಹಾಗೂ ಪ್ರತಿಭಟನಾ ರ್ಯಾಲಿಗಳು ಬೇಡ ಎಂದು ಒಕ್ಕೂಟ ಪ್ರಕಟನೆಯಲ್ಲಿ ತಿಳಿಸಿದೆ. ಉಪ್ಪಿನಂಗಡಿ: ಹಿಜಾಬ್ ಧರಿಸಿಯೇ
ತರಗತಿಯಲ್ಲಿ ಕುಳಿತ ಬಾಲಕಿಯರು!
ಉಪ್ಪಿನಂಗಡಿ: ಹಿಜಾಬ್ ಧರಿಸಲು ಅವಕಾಶ ಕಲ್ಪಿಸಬೇಕೆಂದು ಅಗ್ರಹಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ಘಟನೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದಿದೆ. ಹಿಜಾಬ್ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಅವಕಾಶ ನಿರಾಕರಿಸಿದಾಗ ತರಗತಿ ಬಹಿಷ್ಕರಿಸಿ ಪ್ರವೇಶ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಸ್ವಲ್ಪ ಸಮಯದ ಬಳಿಕ ಕೆಲವು ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಿದರು. ಪ್ರಾಂಶುಪಾಲರು ತರಗತಿಯಿಂದ ಹೊರ ಕಳಿಸಿದರೂ ಮಧ್ಯಾಹ್ನದ ವೇಳೆ 7 ಮಂದಿ ಪ್ರಾಂಶುಪಾಲರ ಜತೆಗೆ ವಾಗ್ವಾದಕ್ಕಿಳಿದು ತರಗತಿ ಯಲ್ಲಿ ಹಿಜಾಬ್ ಧರಿಸಿ ಕುಳಿತುಕೊಂಡರು. ಪೊಲೀಸ್ ಬಲ ಪ್ರಯೋಗಿಸುವ ಎಚ್ಚರಿಕೆ ನೀಡಲಾಯಿತಾದರೂ ಕಾಲೇಜು ತರಗತಿ ಪ್ರವೇಶಿಸಲು ಮೇಲಧಿಕಾರಿಗಳ ಅನುಮತಿ ಬೇಕೆಂದು ಪೊಲೀಸರು ತಿಳಿಸಿದ್ದರಿಂದ 7 ವಿದ್ಯಾರ್ಥಿನಿಯರು ಕುಳಿತಿದ್ದ ತರಗತಿಯಲ್ಲಿ ಪಾಠಪ್ರವಚನ ಸ್ಥಗಿತಗೊಳಿಸಲಾಯಿತು.