ಗದಗ: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಹಿಜಾಬ್ ಧರಿಸಬಾರದೆಂಬ ಶಿಕ್ಷಕರ ಸೂಚನೆಯಿಂದ ಕೆರಳಿದ ವಿದ್ಯಾರ್ಥಿಗಳು, ಹಿಜಾಬ್‌ಗ ಅವಕಾಶ ನೀಡಬೇಕೆಂದು ಆಗ್ರಹಿಸಿ ಕೆಲಕಾಲ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಗರದ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣ ಸಮೀಪದ ಸರ್ಕಾರಿ ಉರ್ದು ಶಾಲೆಯಲ್ಲಿ ನಡೆಯಿತು.
ಎಂದಿನಂತೆ ಬೆಳಗ್ಗೆ 9:30ಕ್ಕೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಿದ್ದಂತೆ ಶಿಕ್ಷಕರು, ನ್ಯಾಯಾಲಯದ ಆದೇಶವನ್ನು ಮನವರಿಕೆ ಮಾಡಿ, ತರಗತಿಯಲ್ಲಿ ಹಿಜಾಬ್ ಧರಿಸದಂತೆ ಸೂಚಿಸಿದರು. ಈ ನಡುವೆ ಶಾಲೆಗೆ ಆಗಮಿಸಿದ ಮಹಿಳೆಯೊಬ್ಬರು ಹಿಜಾಬ್‌ಗ ಅವಕಾಶ ನೀಡಬೇಕೆಂದು ಶಾಲಾ ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದರು.
ನೋಡನೋಡುತ್ತಿದ್ದಂತೆ ವಿದ್ಯಾರ್ಥಿನಿಯರನ್ನು ಶಾಲಾ ಗೇಟ್ ಹೊರಗೆ ಕರೆತಂದು ಪ್ರತಿಭಟನೆ ಆರಂಭಿಸಿದರು. ಅದಕ್ಕೆ ಸುತ್ತಮುತ್ತಲಿನ ಸಮಾಜದ ಪ್ರಮುಖರು ಕೂಡಾ ಪ್ರತಿಭಟನೆಗೆ ಸಾಥ್ ನೀಡಿದರು. ಜೊತೆಗೆ ಕೆಲ ವಿದ್ಯಾರ್ಥಿಗಳ ಪಾಲಕರೂ ಸ್ಥಳಕ್ಕೆ ಆಗಮಿಸಿದ್ದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು.
ಈ ವಿದ್ಯಾರ್ಥಿನಿಯರ ಮನವೊಲಿಕೆಗೆ ಮುಂದಾದ ಶಿಕ್ಷಕರಿಗೆ ವಿದ್ಯಾರ್ಥಿನಿಯರು ಹಿಜಾಬ್ ಎಂಬುದು ನಮ್ಮ ಗೌರವದ ಪ್ರತಿರೂಪ. ಹಿಜಾಬ್ ಬೇಡವೆಂದರೆ, ನಮಗೆ ಶಾಲೆ, ಶಿಕ್ಷಣವೂ ಬೇಡವೆಂದು ಪಟ್ಟು ಹಿಡಿದರು. ಬಳಿಕ ಈ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಡಿಡಿಪಿಐ ಜಿ.ಎಂ. ಬಸವಲಿಂಗಪ್ಪ, ತಹಶೀಲ್ದಾರ್ ಕಿಶನ್ ಕಲಾಲ್ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಮನವೊಲಿಸಿದರು. ಕೋರ್ಟ್ ಆದೇಶದ ಬಗ್ಗೆ ತಿಳಿಹೇಳಿ, ತರಗತಿಗಳಿಗೆ ಕಳುಹಿಸಿದರು. ಅಧಿಕಾರಿಗಳ
ಮಾತಿಗೆ ಮಣಿದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು, ತಲೆಗೆ ಶಾಲು ಹಾಕಿಕೊಂಡು ತರಗತಿಗೆ ಹಾಜರಾದರು.
ಕ್ರಮಕ್ಕೆ ಸೂಚನೆ: ಘಟನೆ ಕುರಿತು ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಂ. ಬಸವಲಿಂಗಪ್ಪ, ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸದಂತೆ ಸರಕಾರದ ಆದೇಶದ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಿದ್ದೇವೆ. ಯಾರೋ ಓರ್ವ ಮಹಿಳೆ ಬಂದು ಶಾಲೆಯಲ್ಲಿ ಹಿಜಾಬ್‌ಗ ಅವಕಾಶ ನೀಡಬೇಕೆಂದು ಪ್ರಚೋದನೆ ನೀಡಿದ್ದೇ ಕೆಲ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಗಿದೆ. ಆ ಮಹಿಳೆ ಯಾರು ಎಂಬುದನ್ನು ಪತ್ತೆ ಮಾಡಿ, ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಹೇಳಿದರು.
ಅಪರಿಚಿತ ಮಹಿಳೆ ವಿರುದ್ಧ ದೂರು: ಶಾಲೆಯಲ್ಲಿ ಹಿಜಾಬ್ ಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಸರಕಾರಿ ಉರ್ದು ಶಾಲೆಯ ಕೆಲ ವಿದ್ಯಾರ್ಥಿನಿಯರಿಗೆ ಪ್ರತಿಭಟನೆ ನಡೆಸಲು ಪ್ರಚೋದಿಸಿದ್ದಾರೆ ಎನ್ನಲಾದ ಅಪರಿಚಿತ ಮಹಿಳೆ ವಿರುದ್ಧ ಶಾಲೆಯ ಮುಖ್ಯ ಗುರುಗಳು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಗದಗ ಶಹರ ಕ್ಷೇತ್ರಶಿಕ್ಷಣಾಧಿಕಾರಿ ರಾಜೇಶ್ವರಿ ಅವರು ಮಾಹಿತಿ ನೀಡಿದರು.