ಹುಬ್ಬಳ್ಳಿ: ಹಿಜಾಬ್, ಅಜಾನ್, ಹಲಾಲ್ ಕಟ್ ಇಂತಹ ವಿಷಯಗಳನ್ನು ಸೌಹಾರ್ದಯುತವಾಗಿ, ನ್ಯಾಯಯುತವಾಗಿ ಬಗೆಹರಿಸಲಾಗಿದೆ. ಎಲ್ಲಾ ವಿಷಯಗಳನ್ನು ಕಾನೂನು ಚೌಕಟ್ಟಿನಡಿಯಲ್ಲಿ ಇತ್ಯರ್ಥಗೊಳಿಸಲಾಗಿದೆ. ಜನರಿಗೆ ದಕ್ಷ ಹಾಗೂ ಜನಪರ ಆಡಳಿತ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷ ಹಾಗೂ ಜನಪರ ಆಡಳಿತ ಮುಖ್ಯವಾಗುತ್ತದೆ. ಜನರು ಇದನ್ನು ಬಯಸುತ್ತಾರೆ ಎಂದು ಸರಕಾರಕ್ಕೆ ಗಂಡಸ್ತನವಿಲ್ಲ ಎನ್ನುವ ಹೋರಾಟಗಾರರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಸದ್ಯಕ್ಕೆ ರಾಜ್ಯದಲ್ಲಿ ವಿಧಾನಪರಿಷತ್ತು ಹಾಗೂ ರಾಜ್ಯಸಭಾ ಚುನಾವಣೆಯಲ್ಲಿದ್ದೇವೆ. ಸಚಿವ ಸಂಪುಟ ವಿಸ್ತರಣೆ ಕುರಿತು ಈಗಾಗಲೇ ವರಿಷ್ಠರ ಗಮನಕ್ಕೆ ತರಲಾಗಿದೆ. ಪಕ್ಷದ ಕೋರ್ ಕಮಿಟಿ ಸಭೆ ಕೂಡ ಮುಗಿದಿದೆ. ಸುಪ್ರೀಂ ಕೊರ್ಟ್ ಆದೇಶದ ಹಿನ್ನೆಲೆಯಲ್ಲಿ ಇತರೆ ಚುನಾವಣೆಗಳನ್ನು ನಡೆಸಬೇಕು. ಇವೆಲ್ಲವನ್ನೂ ವರಿಷ್ಠರು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ವಿಸ್ತರಣೆಗೆ ಸೂಚನೆ ನೀಡಬಹುದು ಎಂದು ಕೊಂಡಿದ್ದೇನೆ. ಇನ್ನೊಂದೆರಡು ದಿನದಲ್ಲಿ ಪುನಃ ವರಿಷ್ಠರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನೀಡುವ ಸೂಚನೆ ಮೇರೆಗೆ ಸಂಪುಟ ವಿಸ್ತರಣೆಗೆ ತಯಾರಿ ಮಾಡಿಕೊಳ್ಳಲಾಗುವುದು. ವಿಜಯೇಂದ್ರ ಅವರನ್ನು ವಿಧಾನ ಪರಿಷತ್ತು ಸದಸ್ಯರನ್ನಾಗಿಸಿ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ ಎಂದರು.
ಇದನ್ನೂ ಓದಿ:ಶರದ್ ಪವಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ ಮರಾಠಿ ನಟಿ ಬಂಧನ!
ಹಳೇ ಮೈಸೂರು ಭಾಗದಲ್ಲಿ ಆಪರೇಶನ್ ಕಮಲ ನಡೆಸುವ ಸಚಿವ ಎಚ್.ಟಿ.ಸೋಮಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ರಾಜಕಾರಣದಲ್ಲಿ ಹಲವಾರು ಬೆಳವಣಿಗೆಗಳು ನಡೆಯುತ್ತವೆ ಎಂದು ಸಚಿವ ಸೋಮಶೇಖರ್ ಅವರ ಹೇಳಿಕೆಯನ್ನುಸಮರ್ಥಿಸಿಕೊಂಡರು.