Advertisement

ಬಿ.ಸಿ.ರೋಡ್‌-ಪುಂಜಾಲಕಟ್ಟೆ  ಹೆದ್ದಾರಿ ಅಭಿವೃದ್ಧಿಗೆ ಚಾಲನೆ

09:54 AM Dec 04, 2018 | |

ಬೆಳ್ತಂಗಡಿ: ಜಿಲ್ಲಾ ಕೇಂದ್ರ ಮಂಗಳೂರಿನಿಂದ ಧರ್ಮಸ್ಥಳವನ್ನು ಸಂಪರ್ಕಿಸುವ ಬಿ.ಸಿ.ರೋಡ್‌-ಕೊಟ್ಟಿಗೆಹಾರ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ಹಲವು ವರ್ಷಗಳ ಬಳಿಕ ಅಭಿವೃದ್ಧಿಗೆ ಕಾಲ ಕೂಡಿಬಂದಿದ್ದು, ಬಿ.ಸಿ.ರೋಡ್‌-ಪುಂಜಾಲಕಟ್ಟೆ ನಡುವೆ ಕಾಮಗಾರಿ ಆರಂಭಗೊಂಡಿದೆ.

Advertisement

ದ್ವಿಪಥವಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆಯಿದ್ದರೂ ಮೊದಲ ಹಂತದಲ್ಲಿ ಬಿ.ಸಿ.ರೋಡ್‌-ಪುಂಜಾಲಕಟ್ಟೆ ನಡುವಣ 19.85 ಕಿ.ಮೀ. ರಸ್ತೆ 157 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ. ಮುಂದಿನ 18 ತಿಂಗಳ ಅವಧಿಯಲ್ಲಿ ಪೂರ್ಣ ಪ್ರಮಾಣದ ಹೆದ್ದಾರಿ ಲಭ್ಯವಾಗಲಿದೆ.

ಹೆದ್ದಾರಿಯು ಪ್ರಸ್ತುತ ಕೇವಲ 5.5 ಮೀ. ಅಗಲವಿದ್ದು, ಬಹುತೇಕ ಕಡೆ ಎರಡು ವಾಹನ ಎದುರು ಬದುರಾದರೆ ಮುಂದುವರಿಯಲು ತಿಣುಕಾಡಬೇಕು. ಶಿರಾಡಿ ಘಾಟಿ ಮುಚ್ಚಿದಾಗಲೂ ಇದೇ ರಸ್ತೆ ಬಳಕೆಯಾಗುತ್ತಿದ್ದು, ಅಭಿವೃದ್ಧಿ ಅನಿವಾರ್ಯವಾಗಿತ್ತು.

ಪ್ರಸ್ತುತ 19.85 ಕಿ.ಮೀ.ಗಳಲ್ಲಿ ಬಿ.ಸಿ. ರೋಡ್‌ನಿಂದ 3.85 ಕಿ.ಮೀ. ಅಂದರೆ ಅಂದಾಜು ಜಕ್ರಿಬೆಟ್ಟುವರೆಗೆ ಚತುಷ್ಪಥಗೊಳ್ಳಲಿದೆ ಮುಂದೆ ಪುಂಜಾಲಕಟ್ಟೆಯ ವರೆಗೆ 16 ಕಿ.ಮೀ. ದ್ವಿಪಥ ವಾಗಲಿದೆ. ಭೂಸ್ವಾಧೀನಕ್ಕೆ ಹೆದ್ದಾರಿಯ ಮಾರ್ಕಿಂಗ್‌ (ಜೆಎಂಸಿ)ಪೂರ್ಣಗೊಂಡಿದ್ದು, ಪೊದೆ ತೆರವುಗೊಳಿಸಲಾಗಿದೆ.

75 ಕಿ.ಮೀ. ಅಭಿವೃದ್ಧಿ
ಬಿ.ಸಿ. ರೋಡ್‌ನಿಂದ ಚಾರ್ಮಾಡಿ ವರೆಗೆ 75 ಕಿ.ಮೀ. ಅಭಿವೃದ್ಧಿಯ ಪ್ರಸ್ತಾವನೆಯಿದ್ದು, ಅದರಲ್ಲಿ ಬಿ.ಸಿ.ರೋಡ್‌-ಪುಂಜಾಲಕಟ್ಟೆ ಸುಮಾರು 20 ಕಿ.ಮೀ. ಕಾಮಗಾರಿಗೆ ಚಾಲನೆ ಸಿಕ್ಕಿದೆ. ಮುಂದಕ್ಕೆ 55 ಕಿ.ಮೀ. ಅಭಿವೃದ್ಧಿಗೆ ಸುಮಾರು 235 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅದು ಮಂಜೂರುಗೊಂಡರೆ ಬಿ.ಸಿ.ರೋಡ್‌-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿಯಾದಂತಾಗುತ್ತದೆ.

Advertisement

ಅಕ್ಷೇಪಣೆಗೆ ಅವಕಾಶ
ಹೆದ್ದಾರಿ ಅಭಿವೃದ್ಧಿಗೆ ಇಲಾಖೆಯ ವಿಶೇಷ ಭೂಸ್ವಾಧೀನಾಧಿಕಾರಿಗಳು ಪ್ರಕಟನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಅಮಾrಡಿ, ಬಂಟ್ವಾಳ, ಕಾಡಬೆಟ್ಟು, ಕಾವಳಮೂಡೂರು, ಮೂಡುಪಡುಕೋಡಿ, ನಾವೂರು, ಪಿಲಾತಬೆಟ್ಟು, ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಚಿಬಿದ್ರೆ, ಕಲ್ಮಂಜ, ಬೆಳ್ತಂಗಡಿ ಕಸ್ಬಾ, ಕುಕ್ಕಾಳ, ಕುವೆಟ್ಟು, ಲಾೖಲ, ಮಾಲಾಡಿ, ಮುಂಡಾಜೆ ಹಾಗೂ ಉಜಿರೆ ಗ್ರಾಮಗಳ ಒಟ್ಟು 9.3800 ಹೆಕ್ಟೇರ್‌ ಜಮೀನು ಈ ಹೆದ್ದಾರಿ ವ್ಯಾಪ್ತಿಗೆ ಬರುತ್ತದೆ.

ಸೇತುವೆ ಪ್ರಗತಿಯಲ್ಲಿ
ರಸ್ತೆಯು ಮೇಲ್ದರ್ಜೆಗೇರಿದ ಬಳಿಕ ಮೊದಲ ಹಂತವಾಗಿ ಮೂರು ಸೇತುವೆಗಳಿಗೆ 28 ಕೋ.ರೂ. ಮಂಜೂರಾಗಿತ್ತು. ನಿಡಿಗಲ್‌, ಚಾರ್ಮಾಡಿ ಹಳ್ಳ ಹಾಗೂ ಮಣಿಹಳ್ಳದಲ್ಲಿ ಮಳೆಗಾಲಕ್ಕೆ ಮೊದಲೇ ಕಾಮಗಾರಿ ಆರಂಭಗೊಂಡಿತ್ತು; ಈಗ ಭರದಿಂದ ಸಾಗುತ್ತಿದೆ.

ಎರಡು ಹಂತಗಳಲ್ಲಿ
ಮೊದಲ ಹಂತದಲ್ಲಿ ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆ ವರೆಗೆ ಅಭಿವೃದ್ಧಿಗೊಳ್ಳುತ್ತಿದ್ದು, 2ನೇ ಹಂತದಲ್ಲಿ ಕೊಟ್ಟಿಗೆಹಾರದ ವರೆಗೆ ಕಾಮಗಾರಿ ನಡೆಯುತ್ತದೆ. ಚಾರ್ಮಾಡಿ ಘಾಟಿ ರಸ್ತೆಗೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ಲಭಿಸಿದ ಬಳಿಕ ಅಭಿವೃದ್ಧಿಯಾಗುತ್ತದೆ.
ನಳಿನ್‌ಕುಮಾರ್‌ ಕಟೀಲು, ಸಂಸದ, ದಕ್ಷಿಣ ಕನ್ನಡ ಜಿಲ್ಲೆ

ಜೆಎಂಸಿ ಕಾರ್ಯ ಆರಂಭ
ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಜೆಎಂಸಿ ಕಾರ್ಯ ಆರಂಭಗೊಂಡಿದೆ. ಆರಂಭದಲ್ಲಿ ಬಿ.ಸಿ.ರೋಡ್‌ನಿಂದ 3.85 ಕಿ.ಮೀ. ಹೆದ್ದಾರಿ ಚತುಷ್ಪಥ ಹಾಗೂ ಮುಂದೆ ಪುಂಜಾಲಕಟ್ಟೆ ವರೆಗೆ 16 ಕಿ.ಮೀ. ದ್ವಿಪಥವಾಗಿ ಅಭಿವೃದ್ಧಿಗೊಳ್ಳಲಿದೆ.
ರಮೇಶ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ರಾ.ಹೆ. ಉಪವಿಭಾಗ, ಮಂಗಳೂರು

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next