Advertisement

ಅಂದ ಹೆಚ್ಚಿಸಿಕೊಂಡ ತಲೆಕಟ್ಟು ಶಾಲೆ

02:51 PM Dec 17, 2018 | |

ಮುದಗಲ್ಲ: ಸರಕಾರಿ ಶಾಲೆಯ ಶಿಕ್ಷಣ, ವಾತಾವರಣ ಅಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಸಮೀಪದ ತಲೆಕಟ್ಟು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ಆಕರ್ಷಣೀಯ ಕೇಂದ್ರವಾಗಿದೆ.

Advertisement

ಶಾಲೆಗೆ ಇತ್ತೀಚೆಗೆ ಸಾರಿಗೆ ಸಂಸ್ಥೆಯ ಬಸ್‌ನಂತೆ ಬಣ್ಣ ಬಳಿಯಲಾಗಿದ್ದು, ವಿದ್ಯಾರ್ಥಿಗಳು, ಪಾಲಕರನ್ನು
ಆಕರ್ಷಿಸುತ್ತಿದೆ. ಇನ್ನು ಶಾಲಾ ಆವರಣ ಹಚ್ಚುಹಸಿರಿನಿಂದ ಕೂಡಿದೆ. ಶಾಲೆಗೆ ಬಸ್‌ ಬಂದಿದೆ ಎಂಬ ಭಾವನೆಯಿಂದ
ವಿದ್ಯಾರ್ಥಿಗಳು ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ. 

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 125 ಮಕ್ಕಳು ಇದ್ದಾರೆ. 4 ಜನ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಬೋಧನೆ
ಮಾಡುತ್ತಿದ್ದಾರೆ. ಶಾಲಾ ಆವರಣಕ್ಕೆ ಕಾಂಪೌಂಡ್‌ ನಿರ್ಮಿಸಲಾಗಿದ್ದು, ಶಾಲೆ ಆವರಣದಲ್ಲಿ 17 ತೆಂಗು, 10
ಬಾದಾಮಿ, ಬೇವಿನಮರ, ಆಲದ ಮರ, ಅರಳಿ ಮರ ಸೇರಿ ವಿವಿಧ ಬಗೆಯ ಗಿಡಮರಗಳನ್ನು ಬೆಳೆಸಲಾಗಿದೆ.

ಇದರಿಂದ ಶಾಲೆಯಲ್ಲಿ ಸದಾ ಹಸಿರಿನ ಜತೆಗೆ ತಂಪಿನ ವಾತಾವರಣವಿದ್ದು ಶಿಕ್ಷಣ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.
ನೀರಲೋಟಿ ಶಾಲೆಯಿಂದ 5 ತಿಂಗಳ ಹಿಂದೆ ಶಾಲೆಗೆ ವರ್ಗವಾಗಿ ಬಂದ ಮುಖ್ಯಗುರುಗಳು ಶಾಲೆಗೆ ಕಾಯಕಲ್ಪ
ನೀಡಬೇಕೆಂದು ಶಾಲಾ ಸುಧಾರಣಾ ಸಮಿತಿ ಹಾಗೂ ಸಹ ಶಿಕ್ಷಕರೊಂದಿಗೆ ಚರ್ಚಿಸಿ ಯೋಜನೆ ರೂಪಿಸಿಕೊಂಡರು.
 
ಅದರಂತೆಯೇ ಶಾಲೆಯ ಸುಸಜ್ಜಿತ ಕೊಠಡಿಗಳ ಹೊರ ಗೋಡೆಗಳಿಗೆ ಕೆಂಪು ಬಸ್‌ನಂತೆ ಬಣ್ಣ ಬಳಿಸಿ ಶಾಲೆಗೆ ಒಂದು
ಕಳೆತಂದರು. ಶಾಲೆಯ ಆವರಣ, ಶೌಚಾಲಯ ಸೇರಿದಂತೆ ಸ್ವತ್ಛತೆಗೆ ಆದ್ಯತೆ ನೀಡಿದ ಮುಖ್ಯಗುರಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸವಾಲು ಒಡ್ಡಿದ್ದಾರೆ. ಇದೀಗ ಶಾಲೆ ಬಿಟ್ಟು ಬೇರೆ ಕಡೆ ಹೋಗಿದ್ದ ಮಕ್ಕಳು ಕೂಡ ಈಗ ತಮ್ಮ ಗ್ರಾಮದ ಶಾಲೆಯತ್ತ ಮುಖ ಮಾಡಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆಯ ಸಿಆರ್‌ಸಿ ಬಸಪ್ಪ ಆರ್‌., ಎಸಿಎಂಸಿ ಸಮಿತಿ, ಊರಿನ ಹಿರಿಯರ ಸಹಕಾರ ಕೂಡ ಕಾರಣವಾಗಿದೆ ಎನ್ನುತ್ತಾರೆ ಮುಖ್ಯಗುರುಗಳು.

ಶಾಲೆಯಲ್ಲಿ ಸೆಲ್ಫಿ: ಸಾಮಾನ್ಯ ಬಣ್ಣದ ಶಾಲೆ ಆಗಿದ್ದರೆ ಜನ ಕಣ್ಣು ಹಾಯಿಸುತ್ತಿರಲಿಲ್ಲ, ಆದರೆ ಈ ಶಾಲೆಯ ಗೋಡೆಗಳಿಗೆ ಬಸ್‌ನಂತೆ ಬಣ್ಣ ಬಳಿದಿದ್ದರಿಂದ ಶಾಲೆ ಮುಂಭಾಗದಲ್ಲಿ ಓಡಾಡುವ ಜನರು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡು ವ್ಯಾಟ್ಸಾಪ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

Advertisement

ಶಾಲೆಗೆ ಹೊಸ ರೂಪ ನೀಡಿದ ಶಿಕ್ಷಕರು, ಶಿಕ್ಷಣ ಇಲಾಖೆ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಾಲೆಯ ವಾತಾವರಣ ಸೇರಿದಂತೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೆ ಮತ್ತಷ್ಟು ಅನುಕೂಲವಾಗಲಿದೆ. ಬಸಪ್ಪ, ಸಿಆರ್‌ಸಿ

„ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next