ಶಹಾಪುರ: ಹಿಂದುಳಿದ ಪ್ರದೇಶವೆನಿಸಿಕೊಂಡು ಮೂಲ ಸೌಕರ್ಯಗಳಿಂದ ನರಳುತ್ತಿದ್ದ ಹೈದ್ರಾಬಾದ್ ಕರ್ನಾಟಕ ಭಾಗದ ರೈತರು, ವಿದ್ಯಾವಂತ ಯುವಕರು ಮತ್ತು ಜನ ಸಾಮಾನ್ಯರಿಗೆ 371 (ಜೆ) ಕಲಂ ಜಾರಿಯಿಂದ ಹೆಚ್ಚು ಅನುಕೂಲವಾಗಿದೆ. ಅಲ್ಲದೆ ಪ್ರಗತಿಯತ್ತ ಸಾಗುತ್ತಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು. ತಾಲೂಕಿನ ಗೋಗಿ(ಕೆ) ಗ್ರಾಮದ ಸರ್ಕಾರಿ ಪ.ಪೂ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ 2 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಪ್ರಗತಿಗೆ ಅನುಕೂಲ: 371 (ಜೆ) ಜಾರಿಯಿಂದ ನಮ್ಮ ಕ್ಷೇತ್ರಗಳಿಗೆ ಪ್ರತಿ ವರ್ಷ 1500 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈ ವ್ಯವಸ್ಥೆಯಿಂದ ಸಾಮಾಜಿಕ ಬದಲಾವಣೆ ಸಾಧ್ಯ. ಇದರಿಂದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅಲ್ಲದೆ ವಿವಿಧ ಕಾಮಗಾರಿ ಇತರೆ ಸರ್ಕಾರಿ ನೌಕರಿ ಪಡೆಯಲು ಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಿದೆ ಎಂದರು.
ಶೇ.8 ಮೀಸಲಾತಿ ಅನುಷ್ಠಾನ: ಶೈಕ್ಷಣಿಕ ಹಾಗೂ ಇತರೆ ನೌಕರಿ ಆಯ್ಕೆಗಳಲ್ಲಿ ಶೇ.8 ಮೀಸಲಾತಿ ಅನುಷ್ಠಾನಗೊಳಿಸಲಾಗಿದೆ. ಅವಳಿ ಗ್ರಾಮಗಳಲ್ಲಿ ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ 75 ಲಕ್ಷ. ರೂ. ಮಂಜೂರಿಯಾಗಿದ್ದು, ಅಲ್ಲದೆ ನಬಾರ್ಡ್ ಅನುದಾನದಲ್ಲಿ ನಾಗನಟಗಿ ಗೋಗಿ ದಿಗ್ಗಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ 90 ಲಕ್ಷ ರೂ. ಒದಗಿಸಲಾಗಿದೆ. ಕಾಲೇಜು ಕಾಂಪೌಂಡ್ ನಿರ್ಮಾಣಕ್ಕೆ 3.85 ಲಕ್ಷ, ಆಲ್ದಾಳ-ಜಮಖಂಡಿ ರಸ್ತೆಗೆ 2 ಕೋಟಿ, ನಗನೂರ, ಚಂದಾಪುರ, ಗೌಡಗೇರಿ, ಚಾಮನಾಳ, ಕೆಂಭಾವಿ ಸೇರಿದಂತೆ ಕೊಡಮನಳ್ಳಿ, ಸಿಂಗನಳ್ಳಿ ಮದ್ರಿಕಿ, ಗೋಗಿ ಗ್ರಾಮಗಳ ನಡುವಣ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ. 7 ಮೀ. ಅಗಲದ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಗೋಗಿ ದರ್ಗಾದ ಸೈಯ್ಯದ್ ಇಸ್ಮಾಯಿಲ್ ಹುಸೇನಿ ಆಸೀಫ್ ಬಾಬಾ ಸಜ್ಜಾದೆ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರಿಯಾನಬೇಗಂ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಚಂದಪ್ಪ ತಾಯಮಗೋಳ್, ಮಾಣಿಕರಡ್ಡಿ ಶಿರಡ್ಡಿ, ಗುರುನಾಥರಡ್ಡಿ ಗುತ್ತೇದಾರ ಇತರರಿದ್ದರು.
2 ಕೋಟಿಗೂ ಅಧಿಕ ವೆಚ್ಚ ದ ಕಾಮಗಾರಿಗೆ ಅಡಿಗಲ್ಲು
2018-19ನೇ ಸಾಲಿನ ಶಿಕ್ಷಣ ಇಲಾಖೆಯಿಂದ ಪ್ರೌಢಶಾಲೆ ಮರು ನಿರ್ಮಾಣ ಯೋಜನೆಯಡಿ 47.25 ಲಕ್ಷ ಕಾಮಗಾರಿ, ಎಸ್‌ಡಿಪಿ ಯೋಜನೆಯಡಿ ಕೊಳವೆಬಾವಿ ನೀರು ಸರಬರಾಜು, 30 ಲಕ್ಷ ವೆಚ್ಚದ ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ. ಗೋಗಿ(ಕೆ) ಯಿಂದ ಬಾಣಿತಿಹಾಳ ರಸ್ತೆ ಸುಧಾರಣೆಗೆ 50 ಲಕ್ಷ, ಸುವರ್ಣ ಗ್ರಾಮ ಯೋಜನೆಯಡಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 50 ಲಕ್ಷ , ಎಚ್‌ಕೆಆರ್‌ಡಿಬಿ ಯೋಜನೆಯಡಿ ಸರ್ಕಾರಿ ಪ್ರೌಢಶಾಲೆ 4 ಕೊಠಡಿಗಳ ಕಟ್ಟಡಕ್ಕೆ 57 ಲಕ್ಷ ರೂ. ಕಾಮಗಾರಿಗಳಿಗೆ ಒಟ್ಟು 2 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಲಾಯಿತು.