Advertisement

ಉನ್ನತ ಶಿಕ್ಷಣ ಸಚಿವ ಜಿಟಿಡಿ ಟೆಂಪಲ್‌ ರನ್‌

12:15 PM Jul 14, 2018 | Team Udayavani |

ಮೈಸೂರು: ಸಚಿವರಾದ ನಂತರ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಆಷಾಢ ಅಮಾವಾಸ್ಯೆ ಪ್ರಯುಕ್ತ ಕುಟುಂಬ ಸಮೇತ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಹುಟ್ಟೂರು ಮೈಸೂರು ತಾಲೂಕಿನ ಗುಂಗ್ರಾಲ್‌ಛತ್ರ ಗ್ರಾಮದಲ್ಲಿರುವ ಈಶ್ವರ ದೇವಸ್ಥಾನ, ತ್ರಿಪುರ ಸುಂದರಿ ಉತ್ತನಹಳ್ಳಿ ಮಾರಮ್ಮ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು. ನಂತರ ನಂಜನಗೂಡಿಗೆ ತೆರಳಿ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದರು.ಬಳಿಕ ತಗಡೂರು ಅಂಕನಾಥೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. 

ಸಿಎಂ ಆಗಮನ: ಚಾಮುಂಡಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಜು.20ರಂದು ಮೊದಲ ಆಷಾಢ ಶುಕ್ರವಾರಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎಲ್ಲಾ ಜಲಾಶಯಗಳೂ ಭರ್ತಿಯಾಗಿವೆ. 20ರಂದು ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಗೆ ಮುಖ್ಯಮಂತ್ರಿ ಬಾಗಿನ ಅರ್ಪಿಸಲಿದ್ದಾರೆ ಎಂದು ತಿಳಿಸಿದರು.

ಅದ್ಧೂರಿ ದಸರಾ: ಈ ಬಾರಿ ಅದ್ಧೂರಿ ಹಾಗೂ ವೈಭವವಾಗಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಈಗಾಗಲೇ ದಸರಾ ಉನ್ನತಮಟ್ಟದ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ನಿಭಾಯಿಸುತ್ತೇನೆ: ಉನ್ನತ ಶಿಕ್ಷಣ ಇಲಾಖೆ ಬೇಡ ಕಂದಾಯ ಖಾತೆ ಕೊಡಿ ಎಂದು ಆರಂಭದಲ್ಲಿ ಬೇಡಿಕೆ ಇಟ್ಟಿದ್ದು ನಿಜ. ಆದರೆ, ಕಂದಾಯ ಇಲಾಖೆ ಕಾಂಗ್ರೆಸ್‌ ಪಕ್ಷದ ಪಾಲಾದ್ದರಿಂದ ಈಗ ಉನ್ನತ ಶಿಕ್ಷಣ ಇಲಾಖೆಯನ್ನು ಒಪ್ಪಿಕೊಂಡಿದ್ದು, ತಜ್ಞರ ಸಲಹೆ ಪಡೆದು ಈ ಇಲಾಖೆಯನ್ನು ಉತ್ತಮವಾಗಿ ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ರಾಜ್ಯದ ಪದವಿ ಕಾಲೇಜುಗಳಿಗೆ ಹತ್ತು ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಿದ್ದು, ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕುಲಪತಿ ನೇಮಕವನ್ನು ಶೀಘ್ರದಲ್ಲೇ ಮಾಡಲಾಗುವುದು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ಮಾನ್ಯತೆ ನವೀಕರಣ ಸಂಬಂಧ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದಿದೆ ಎಂದು ತಿಳಿಸಿದರು.

ಕೃತಜ್ಞತಾ ಸಭೆ: ಜು.15ರಂದು ಚಾಮುಂಡೇಶ್ವರಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಲಿಂಗದೇವರಕೊಪ್ಪಲು ಗ್ರಾಮದಲ್ಲಿ ಬೃಹತ್‌ ಕೃತಜ್ಞತಾ ಸಭೆ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜಿ.ಟಿ.ದೇವೇಗೌಡರ ಪತ್ನಿ ಲಲಿತಾದೇವೇಗೌಡ, ಪುತ್ರ ಜಿ.ಡಿ.ಹರೀಶ್‌ ಗೌಡ, ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ, ಮುಖಂಡರಾದ ಗಂಗಾಧರ ಗೌಡ ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next