Advertisement

ಪಾನಮತ್ತ ಪತ್ನಿ ಕೊಂದ ಪತಿ ಜೀವಾವಧಿ ಶಿಕ್ಷೆ ರದ್ದು

11:28 AM Oct 18, 2022 | Team Udayavani |

ಬೆಂಗಳೂರು: ಹಬ್ಬದ ದಿನ ಅಡುಗೆ ಮಾಡಿಲ್ಲ ಎಂದು ಕೋಪಗೊಂಡು ಪಾನಮತ್ತಳಾಗಿದ್ದ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿದ ಹೈಕೋರ್ಟ್‌, ಆತನನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಆದೇಶಿಸಿದೆ.

Advertisement

ತನ್ನ ಪತ್ನಿ ರಾಧಾಳನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಸದ್ಯ ಜೈಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸುರೇಶ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಹಾಗೂ ನ್ಯಾ, ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

“ಹಬ್ಬದ ದಿನ ಅಡುಗೆ ಮಾಡಿಲ್ಲ, ಮಕ್ಕಳಿಗೆ ಊಟ ಕೊಟ್ಟಿಲ್ಲ. ಪಾನಮತ್ತಳಾಗಿ ಹೆಂಡತಿ ಮಲಗಿರುವುದಕ್ಕೆ ಕೋಪಗೊಂಡ ಪತಿ ದಿಢೀರ್‌ ಆಗಿ ಆವೇಷದಿಂದ ದೊಣ್ಣೆಯಿಂದ ಹೊಡೆದಿದ್ದಕ್ಕೆ ಸಾವು ಸಂಭವಿಸಿದೆ. ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಹಾಗಾಗಿ, ಆತನು ಮಾಡಿದ್ದು ಕೊಲೆಯೆಂದು ಪರಿಗಣಿಸಲಾಗುವು ದಿಲ್ಲ. ಬದಲಿಗೆ “ಉದ್ದೇಶಪೂರ್ವಕವಲ್ಲದ ನರಹತ್ಯೆ’ ಎಂದು ಪರಿಗಣಿಸಬೇಕಾಗುತ್ತದೆ. ಹಾಗಾಗಿ, ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್‌ 302 (ಕೊಲೆ) ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ಆದೇಶವನ್ನು ಮಾರ್ಪಾಡಿಸಿ ಅದನ್ನು “ಉದ್ದೇಶಪೂರ್ವಕ ವಲ್ಲದ ನರಹತ್ಯೆ’ ಆರೋಪ ಎಂದು ಪರಿಗಣಿಸಿದೆ.

ಈಗಾಗಲೇ ಆರೋಪಿ 6 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಆನುಭವಿಸಿರುವ ಕಾರಣ, ಆತನ ಮೇಲೆ ಬೇರೆ ಯಾವುದೇ ಪ್ರಕರಣ ಇಲ್ಲದಿದ್ದರೆ ಆತನನ್ನು ತಕ್ಷಣ ಜೈಲಿ ನಿಂದ ಬಿಡುಗಡೆಗೊಳಿಸುವಂತೆ ಹೈಕೋರ್ಟ್‌ ಆದೇಶಿಸಿದೆ. ಮೃತ ಮಹಿಳೆ ಮದ್ಯ ವ್ಯಸನಿಯಾಗಿದ್ದಳು ಎಂಬುದನ್ನೂ ಸಾಕ್ಷಿಗಳು ದೃಢಪಡಿಸುತ್ತಿವೆ. ಇಬ್ಬರು ಮಕ್ಕಳನ್ನು ಹೊಂದಿದ್ದ ಆಕೆ ಯಾವುದೇ ಮನೆ ಕೆಲಸ ಮಾಡುತ್ತಿರಲಿಲ್ಲ. ಗೌರಿ ಹಬ್ಬದ ದಿನ ಸಹ ಆಕೆ ಅಡುಗೆ ಮಾಡದೆ ಹಬ್ಬವನ್ನು ಆಚರಿಸದೆ ಕುಡಿದು ಮನೆಯಲ್ಲಿ ಮಲಗಿದ್ದಳು ಎಂಬುದನ್ನು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ಸುರೇಶ ತನ್ನ ಮೊದಲ ಪತ್ನಿ ಮೀನಾಕ್ಷಿಯಿಂದ ಪ್ರತ್ಯೇಕವಾಗಿ ವಾಸುತ್ತಿದ್ದ. ಇದೇ ವೇಳೆ ರಾಧಾ ಅವರ ಪತಿ ಅಗಲಿದ್ದರು. ಹೀಗಾಗಿ ಸುರೇಶ ಮತ್ತು ರಾಧಾ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. 2016ರಲ್ಲಿ ಗಣೇಶ ಹಬ್ಬದ ದಿನ ಸುರೇಶ ಮನೆಗೆ ಬಂದಾಗ ಹಬ್ಬವನ್ನೂ ಆಚರಿಸದೆ, ಅಡುಗೆ ಮಾಡದೆ, ಮಕ್ಕಳಿಗೂ ಊಟ ಕೊಡದೆ ರಾಧಾ ಕುಡಿದು ಮಲಗಿದ್ದಳು. ಕೋಪಗೊಂಡ ಸುರೇಶ ದೊಣ್ಣೆಯಿಂದ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿದ್ದಳು. 2017ರಲ್ಲಿ ವಿಚಾರಣಾ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಸುರೇಶ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next