ಬೆಂಗಳೂರು: ನಗರದ ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಪರ್ಯಾಯವಾಗಿ ಮೈಸೂರು ರಾಜ ಮನೆತನಕ್ಕೆ “ವರ್ಗಾವಣೆ ಅಭಿವೃದ್ಧಿ ಹಕ್ಕು ‘ (ಟಿಡಿಆರ್) ನೀಡುವುದಿಲ್ಲ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ತಿಳಿಸಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ. ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಆ ವೇಳೆ ಸರ್ಕಾರದ ಪರ ಹಾಜರಾದ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ಕೆ. ನಾವದಗಿ, ಅರಮನೆ ಮೈದಾನ ಸರ್ಕಾರಕ್ಕೆ ಸ್ವಾಧೀನವಾಗಿದೆ. ಹಾಗಾಗಿ ಅರಮನೆ ಮೈದಾನದ ಜಾಗಕ್ಕೆ ಸರ್ಕಾರವೇ ಮಾಲೀಕತ್ವ ಹೊಂದಿರುವುದರಿಂದ ಮೈಸೂರು ರಾಮನೆತನದವರಿಗೆ ವರ್ಗಾವಣೆ ಅಭಿವೃದ್ಧಿ ಹಕ್ಕು (ಟಿಡಿಆರ್)ನೀಡಲು ಸಾಧ್ಯವಿಲ್ಲ. ಮಾಲೀಕತ್ವ ಪ್ರಶ್ನಿಸಿ ರಾಜ ಮನೆತನ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದ್ದು, ಅರಮನೆ ಮೈದಾನ ಸ್ವಾಧೀನಕ್ಕೆ ಸುಪ್ರೀಂಕೋರ್ಟ್ ಯಾವುದೇ ತಡೆ ನೀಡಿಲ್ಲ ಎಂದು ಹೇಳಿದರು.
ಅಲ್ಲದೆ, ಟಿಡಿಆರ್ ಯಾರಿಗೆ ನೀಡಬೇಕೆಂಬ ಬಗ್ಗೆ ಇನ್ನೂ ಗೊಂದಲವಿದೆ. ಹಾಗಾಗಿ ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟನೆ ಕೋರಲು ಚಿಂತಿಸಲಾಗಿದೆ. ಗುರುವಾರ (ಫೆ.18) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಡ್ವೋಕೇಟ್ ಜನರಲ್ ನ್ಯಾಯಪೀಠಕ್ಕೆ ತಿಳಿಸಿದರು. ಆ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮಾ.10ಕ್ಕೆ ಮುಂದೂಡಲಾಯಿತು.
ನ್ಯಾಯಪೀಠ ಕಳೆದ ವಿಚಾರಣೆ ವೇಳೆ, ಜಯಮಹಲ್ ರಸ್ತೆ (ಮೇಖ್ರಿ ವೃತ್ತದಿಂದ ದಂಡು ರೈಲು ನಿಲ್ದಾಣದವರೆಗೆ) ಮತ್ತು ಬಳ್ಳಾರಿ ರಸ್ತೆ (ಮೇಖ್ರಿ ವೃತ್ತದಿಂದ ಬಿಡಿಎ ಜಂಕ್ಷನ್ ವರೆಗೆ) ಅಗಲೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿತ್ತು. ಅಲ್ಲದೆ, ರಸ್ತೆ ಅಗಲೀಕರಣಕ್ಕೆ ಅರಮನೆಗೆ ಸೇರಿದ 16 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸುಪ್ರೀಂಕೋರ್ಟ್ 2014ರ ನ.21 ಮತ್ತು ಹೈಕೋರ್ಟ್ 2016ರ ಸೆ.7ರಂದು ಅನುಮತಿ ನೀಡಿದ್ದವು. ಆದರೆ ಅದನ್ನು ನಿರ್ಲಕ್ಷಿಸಲಾಗಿದೆ. ಆದರೆ ಮೈಸೂರು ರಾಜವಂಶಸ್ಥರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಒಂದೇ ಕಾರಣ ಮುಂದಿಟ್ಟುಕೊಂಡು ಸ್ಥಳೀಯ ಆಡಳಿತ ಟಿಡಿಆರ್ ನೀಡಲು ಮತ್ತು ರಸ್ತೆ ಅಗಲೀಕರಣ ಮಾಡದೆ ಸುಮ್ಮನೆ ಕಾಲಹರಣ ಮಾಡುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಮೂಕಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ನ್ಯಾಯಪೀಠ ಗಂಭೀರ ಆರೋಪ ಮಾಡಿತ್ತು.
ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ರಸ್ತೆ ಅಗಲೀಕರಣ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದೆ ಇರುವುದರಿಂದ ಆ ಭಾಗದಲ್ಲಿ ಅಧಿಕ ವಾಹನ ದಟ್ಟಣೆ ಉಂಟಾಗಿ, ಪ್ರತಿದಿನವೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.