ಹನೂರು: ದೇಶದಲ್ಲಿ ಪ್ರಸ್ತುತ 292 ಮಿಲಿಯನ್ ಟನ್ ಆಹಾರ ಉತ್ಪಾದಿಸುತ್ತಿದ್ದು, ಜನಸಂಖ್ಯೆಗನುಗುಣವಾಗಿ ಪೌಷ್ಟಿಕಾಂಶ ಆಹಾರ ಅವಶ್ಯಕತೆಯಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ| ಎಸ್.ರಾಜೇಂದ್ರ ಪ್ರಸಾದ್ ತಿಳಿಸಿದರು.
ತಾಲೂಕಿನ ಗಡಿಯಂಚಿನ ನೆಕ್ಕುಂದಿ ಪೋಡಿಗೆ ಭೇಟಿ ನೀಡಿ ಬುಡಕಟ್ಟು ಉಪ ಯೋಜನೆಯಡಿ ತರಬೇತಿ ಮತ್ತು ಕೃಷಿ ಪರಿಕರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ದಿನೇ ದಿನೆ ಜನಸಂಖ್ಯೆ ಹೆಚ್ಚುತ್ತಿದ್ದು, ಆಹಾರ ಕೂಡ ಹೆಚ್ಚು ಉತ್ಪಾದನೆಯಾಗಬೇಕಿದೆ. ಪೌಷ್ಟಿಕಾಂಶ ಮತ್ತು ಲಘು ಲವಣಾಂಶಗಳ ಆಹಾರ ಉತ್ಪಾಸಿಸಬೇಕಿದೆ. ಆದರೆ, ಅಂತಾರಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅವಶ್ಯಕವಿರುವಷ್ಟು ಪೌಷ್ಟಿಕಾಂಶ ದೊರೆಯುತ್ತಿಲ್ಲ. ಹೀಗಾಗಿ ಕೃಷಿ ವಿಶ್ವವಿದ್ಯಾಲಯಗಳಮೂಲಕಉತ್ತಮವಾದ ಅಭಿವೃದ್ಧಿಪಡಿಸಿದ ಹೈಬ್ರೀಡ್ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದೆ. ಈ ತಳಿಗಳು ಸ್ಥಳೀಯವಾಗಿ ಬಳಸುವ ತಳಿಗಳಿಗಿಂತ 2-3 ಪಟ್ಟು ಹೆಚ್ಚಿನ ಇಳುವರಿ ನೀಡುತ್ತವೆ. ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಪಂ ಸದಸ್ಯ ಬಸವರಾಜು ಮಾತನಾಡಿ, ರಾಮಾಪುರ ಹಿಂದುಳಿದ ಹೋಬಳಿಯಾಗಿದ್ದು, ರೈತರಿಗೆ ಕಾಲಕಾಲಕ್ಕೆ ತರಬೇತಿ ಮತ್ತು ಮಾಹಿತಿ ನೀಡಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ 150 ಗಿರಿಜನ ಕುಟುಂಬಗಳಿಗೆ ಗುದ್ದಲಿ, ಸಲಿಕೆ, ಕುಡುಗೋಲು, ಟಾರ್ಪಲಿನ್ ಮತ್ತು ಬಿತ್ತನೆ ಬೀಜಗಳ ಸಂರಕ್ಷಣಾ ಪೆಟ್ಟಿಗೆಯನ್ನು ವಿತರಿಸಲಾಯಿತು.ಈವೇಳೆ ಕೃಷಿ ವಿಶ್ವವಿದ್ಯಾಲಯದ ಕೆ.ಮಧುಸೂದನ್, ಎಂ.ಪಿ.ರಾಜಣ್ಣ, ಟಿ.ಎಂ.ರಮಣಪ್ಪ, ನಿರಂಜನಮೂರ್ತಿ, ರಮಣಪ್ಪ, ಸಿದ್ದರಾಜು, ವಿಶ್ವನಾಥ್, ರೀಡಾ ಸಂಸ್ಥೆಯ ಶಿವರುದ್ರಪ್ಪ ಇತರರಿದ್ದರು.
ಹೈಬ್ರೀಡ್ ತಳಿ ಬೆಳೆ ವೀಕ್ಷಣೆ: ಕಾರ್ಯಕ್ರಮಕ್ಕೂ ಮುನ್ನ ಕುಲಪತಿ ಡಾ| ರಾಜೇಂದ್ರ ಪ್ರಸಾದ್ ಅವರು ಮಾದೇವಮ್ಮ ಎಂಬ ರೈತ ಮಹಿಳೆಯ ಜಮೀನಿಗೆ ಭೇಟಿ ನೀಡಿ ವಿವಿಯಿಂದ ನೀಡಿರುವ ಎಂಎಲ್-365 ತಳಿಯ ರಾಗಿ ಬೆಳೆ ಮತ್ತು ತರಕಾರಿ ಬೆಳೆಗಳನ್ನು ಪರಿಶೀಲಿಸಿದರು. ಇದೇ ವೇಳೆ ವಿವಿಯ ಸವಲತ್ತುಗಳ ಪ್ರಯೋ ಜನ ಪಡೆಯಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು