ಬೆಂಗಳೂರು: ಮೊದಲಿಗೆ ಟಿ20 ತಂಡ, ಈಗ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡದ ನಾಯಕತ್ವ… ಎರಡನ್ನೂ ತ್ಯಜಿಸಿದ್ದಾರೆ ವಿರಾಟ್ ಕೊಹ್ಲಿ. ಶಾರ್ಟ್ ಫಾರ್ಮ್ಯಾಟ್ ನಲ್ಲಿ ಯಶಸ್ವಿ ನಾಯಕ ಎನ್ನಿಸಿಕೊಂಡಿರುವ ವಿರಾಟ್ ಕೊಹ್ಲಿಯ ಈ ನಿರ್ಧಾರ ಹಲವರ ಹುಬ್ಬೇರಿಸಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹಾಗೂ ಇನ್ನೂ ಹೆಚ್ಚು ಕಾಲ ಆಡಬೇಕು ಎಂದಾದರೆ, ಇಂಥದ್ದೊಂದು ನಿರ್ಧಾರ ತೆಗೆದು ಕೊಳ್ಳಲೇಬೇಕಾಗಿತ್ತು ಎಂದು ಹೇಳುತ್ತಾರೆ ವಿಶ್ಲೇಷಕರು..
ವರ್ಕ್ ಲೋಡ್ ಹೆಚ್ಚಳ
2020ರ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಇಲ್ಲಿವರೆಗೆ ಕೊಹಿ ವರ್ಕ್ ಲೋಡ್ ತುಸು ಹೆಚ್ಚಾಗಿಯೇ ಇದೆ. ಅಂದರೆ, ಅಲ್ಲಿಂದ ಇಲ್ಲಿವರೆಗೆ ಕೊಹ್ಲಿ 12 ಟೆಸ್ಟ್ ಮತ್ತು ಏಕದಿನ, 15 ಟಿ20, 22 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಅಂದರೆ, ಪ್ರತಿ ಆರು ದಿನಕ್ಕೆ ಒಂದು ಪಂದ್ಯ ಆಡಿದಂತೆ ಆಗಿದೆ.
ಇದನ್ನೂ ಓದಿ:ವಿಶ್ವಕಪ್ ನಲ್ಲಿ ಈ ಆಟಗಾರ ಟೀಂ ಇಂಡಿಯಾದ ಪ್ರಮುಖ ಅಸ್ತ್ರವಾಗಲಿದ್ದಾರೆ: ಕೊಹ್ಲಿ
ಇನ್ನು 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭವಾಗಿದ್ದು ಅಲ್ಲಿಂದ ಇಲ್ಲಿವರೆಗೆ ಕೊಹ್ಲಿ 1024 ದಿನ ಆಟವಾಡಿದ್ದಾರೆ. ಅಂದರೆ, ಸರಿಸುಮಾರು ಮೂರುವರೆ ವರ್ಷ. ಇದರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು, ಐಪಿಎಲ್ ಪಂದ್ಯಗಳು ಸೇರಿವೆ. ಇದರಲ್ಲಿ ಪ್ರವಾಸ, ಅಭ್ಯಾಸ ಪಂದ್ಯ ಸೇರಿದರೆ ದಿನಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಇದರಲ್ಲಿ ಅರ್ಧದಷ್ಟು ದಿನ ನಾಯಕನಾಗಿ ಕಾಲ ಕಳೆದಿದ್ದಾರೆ. ಅದರಲ್ಲೂ ಕಳೆದ ಎರಡು ವರ್ಷದಿಂದ ವರ್ಕ್‌ಲೋಡ್ ಹೆಚ್ಚಾಗಿದೆ ಎಂದೇ ಹೇಳಲಾಗುತ್ತಿದೆ.
ವಿರಾಟ್ ಹೇಳಿದ್ದೇನು?
ಕಳೆದ ವರ್ಷದ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಕೊಹ್ಲಿ ಒಂದು ಮಾತು ಹೇಳಿದ್ದರು. ಕಳೆದ ಎಂಟು ವರ್ಷಗಳಲ್ಲಿ ನಾನು ವರ್ಷಕ್ಕೆ 300 ದಿನ ಆಟದಲ್ಲೇ ಕಳೆಯುತ್ತಿದ್ದೇನೆ. ಇದರಲ್ಲಿ ಅಭ್ಯಾಸ ಮತ್ತು ಪ್ರವಾಸ ಸೇರಿದೆ. ಇದು ಆಟಗಾರನಿಗೆ ಹೆವ್ವಿ ಶೆಡ್ನೂಲ್ ಆಗಿದೆ ಎಂದು ಹೇಳಿದ್ದರು.
ಆರ್‌ಸಿಬಿಯಲ್ಲಿ…
ಆರ್‌ಸಿಬಿಯಲ್ಲಿ ಕೊಹ್ಲಿ ಆಟ ಉತ್ತಮವಾಗಿದ್ದರೂ, ನಾಯಕತ್ವದ ವಿಚಾರಕ್ಕೆ ಬಂದರೆ, ಗೆಲುವಿಗಿಂತ ಸೋಲೇ ಹೆಚ್ಚು ಕಂಡಿದ್ದಾರೆ. ಅಂದರೆ, ಅಂದರೆ, 60 ಪಂದ್ಯಗಳಲ್ಲಿ ಗೆದ್ದಿದ್ದರೆ, 65ರಲ್ಲಿ ಸೋತಿದ್ದಾರೆ. ಹೀಗಾಗಿ ನಾಯಕತ್ವ ತೊರೆದು, ಬ್ಯಾಟಿಂಗ್ ಕಡೆ ಗಮನ ಕೊಡಲು ಕೊಹ್ಲಿ ಮುಂದಾಗಿದ್ದಾರೆ.
ಯಶಸ್ವಿ ಟಿ20 ನಾಯಕ
ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಸರಣಿಗಳನ್ನು ಜಯಿಸಿದ್ದಾರೆ. ಇತ್ತೀಚೆಗೆ ಶತಕ ಬಾರಿಸಿಲ್ಲ ಎಂಬುದನ್ನು ಬಿಟ್ಟರೆ, ಅವರ ಆಟವೇನೂ ಕೆಟ್ಟದಾಗಿಲ್ಲ. ಕಳೆದ ಆರು ಟಿ20 ಪಂದ್ಯಗಳಲ್ಲಿನ ಕೊಹ್ಲಿ ಆಟ ಇಂತಿದೆ: 85, 0, 73,77,1 ಮತ್ತು 80 ಹೀಗಾಗಿ ಫಾರ್ಮ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.