Advertisement

ಮಂಡ್ಯ ರಂಗು, ಇತ್ತ ಕಲಬುರಗಿ ಗುಂಗು!

02:04 AM Mar 22, 2019 | Team Udayavani |

ರಾಯಚೂರು: ದಕ್ಷಿಣದಲ್ಲಿ ಮಂಡ್ಯ ಕ್ಷೇತ್ರ ಈಗ ಹೈವೋಲ್‌ಟೇಜ್‌ ಕಣವಾಗಿ ಮಾರ್ಪಟ್ಟರೆ, ಉತ್ತರ ಕರ್ನಾಟಕ ಭಾಗದಲ್ಲಿ ಕಲಬುರಗಿ ಹಾಟ್‌ ಫೆವರೇಟ್‌ ಕಣವಾಗಿದೆ. ಮಂಡ್ಯದಲ್ಲಿ ದೋಸ್ತಿ ಸರ್ಕಾರ ಶತಾಯ ಗತಾಯ ಸುಮಲತಾರನ್ನು ಹಣಿಯುವ ಪಣ ತೊಟ್ಟರೆ; ಇತ್ತ ಬಿಜೆಪಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸುವ ತಂತ್ರಗಾರಿಕೆ ಹೆಣೆಯುತ್ತಿದೆ.

Advertisement

ಸತತ 9 ಬಾರಿ ವಿಧಾನಸಭೆ ಹಾಗೂ 2 ಬಾರಿ ಲೋಕಸಭೆ ಪ್ರವೇಶಿಸಿರುವ ಮಲ್ಲಿಕಾರ್ಜುನ ಖರ್ಗೆಗೆ ಮೊದಲ ಬಾರಿಗೆ ಅವರ ಸೋಲು-ಗೆಲುವಿನ ಬಗ್ಗೆ ಲೆಕ್ಕಾಚಾರ ಶುರುವಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಸಿಎಂ ಸೇರಿ ರಾಜ್ಯಮಟ್ಟದ ನಾಯಕರು, ಸಿನಿಮಾ ನಟರು ಪ್ರಚಾರಕ್ಕಿಳಿದರೆ, ಕಲಬುರಗಿ ಕ್ಷೇತ್ರದಲ್ಲಿ ಈಗಾಗಲೇ ಪ್ರಧಾನಿ, ಎಐಸಿಸಿ ಅಧ್ಯಕ್ಷರೇ ಪ್ರಚಾರ ಮಾಡಿ ಹೋಗಿದ್ದಾರೆ. ಅದಕ್ಕಾಗಿಯೇ ಖರ್ಗೆ ಅವರು “ಗಲ್ಲಿಯಿಂದ ದಿಲ್ಲಿವರೆಗೂ ನನ್ನನ್ನು ಸೋಲಿಸುವ ಹುನ್ನಾರ ನಡೆದಿದೆ’ ಎಂದು ಅಲವತ್ತುಕೊಂಡಿದ್ದಾರೆ.

ಕಾಂಗ್ರೆಸ್‌ ಶಾಸಕ ಉಮೇಶ ಜಾಧವ್‌ ಬಿಜೆಪಿ ಪಾಳಯ ಸೇರಿ ಖರ್ಗೆ ವಿರುದ್ಧ  ಮುಗಿ ಬಿದ್ದಿದ್ದಾರೆ. ಏತನ್ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಆಗಲೇ ವೋಟಿಂಗ್‌ ಶುರುವಾಗಿದೆ. ಖರ್ಗೆ ಮತ್ತು ಜಾಧವ ಅವರಲ್ಲಿ ನಿಮ್ಮ ಆಯ್ಕೆ ಯಾವುದು ಎನ್ನುವ ಪೋಸ್ಟ್‌ಗಳು ಹೆಚ್ಚು ಕಂಡು ಬರುತ್ತಿವೆ. ಖರ್ಗೆ ಮತ್ತು ಬಿಜೆಪಿ ಬೆಂಬಲಿಗರ ಪರಸ್ಪರ ಪೋಸ್ಟ್‌ ಗಳು ಕುತೂಹಲ ಹೆಚ್ಚಿಸಿವೆ.

ಬೆಟ್ಟಿಂಗ್‌ ಪರ್ವ: ಕಣ ರಂಗೇರಿದ್ದರಿಂದ ಬೆಟ್ಟಿಂಗ್‌ ಕೂಡ ಜೋರಾಗಿದೆ. ದೇಶದಲ್ಲಿ ಬಿಜೆಪಿ 400 ಸೀಟು ದಾಟಲಿದೆ, ಖುದ್ದು ರಾಹುಲ್‌ ಗಾಂಧಿ ಸೋಲುತ್ತಾರೆ, ಮಂಡ್ಯದಲ್ಲಿ ಸುಮಲತಾ ಗೆಲ್ಲುತ್ತಾರೆ, ರಾಜ್ಯದಲ್ಲಿ ಬಿಜೆಪಿಗೆ 10 ಸ್ಥಾನ ಹೀಗೆ ನಾನಾ ರೀತಿಯ ಬೆಟ್ಟಿಂಗ್‌ಗಳ ಮಧ್ಯ ಮಲ್ಲಿಕಾರ್ಜುನ ಖರ್ಗೆ ಸೋಲು-ಗೆಲುವು ಕೂಡ ಸೇರಿದೆ. ಸತತ 8ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಸಂಸತ್‌ನ ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಈ ಭಾಗದಲ್ಲಿ ಉತ್ತಮ ವರ್ಚಸ್ಸು ಹೊಂದಿದ್ದಾರೆ. ಹೈ-ಕ ಭಾಗದಲ್ಲಿ ಪ್ರಭಾವಿ ಎನಿಸಿರುವ ಅವರಿಗೆ ಸೋಲಿನ ಭೀತಿ ಒಡ್ಡಿದರೆ ಉಳಿದ ಜಿಲ್ಲೆಗಳಲ್ಲೂ ಮತ ಪರಿವರ್ತನೆ ಮಾಡಬಹುದೆಂಬತಂತ್ರಗಾರಿಕೆ ಯೂ ಬಿಜೆಪಿಯದ್ದಾಗಿದೆ.

ರಂಗೇರದ ಇತರೆ ಕಣ: ಉಳಿದ ಕ್ಷೇತ್ರಗಳಲ್ಲಿ ಚುನಾವಣೆ ನಿರೀಕ್ಷಿತ ಮಟ್ಟದಲ್ಲಿ ರಂಗೇರುತ್ತಿಲ್ಲ. ಒಂದೆಡೆ ಬಿಜೆಪಿ ಅಭ್ಯರ್ಥಿಗಳು ಅಂತಿಮಗೊಳ್ಳದ ಕಾರಣ ಪ್ರಚಾರದ ಅಬ್ಬರ ಅಷ್ಟಾಗಿ ಕಾಣಿಸುತ್ತಿಲ್ಲ. ಕಾಂಗ್ರೆಸ್‌ ಟಿಕೆಟ್‌ ಅ ಧಿಕೃತವಾಗದಿದ್ದರೂ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿ ಪಕ್ಷ ಸಂಘಟಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಮೋದಿಯನ್ನು ಟೀಕಿಸುತ್ತಿದ್ದರೆ, ಬಿಜೆಪಿ ನಾಯಕರು ಮೋದಿಯನ್ನು ಗೆಲ್ಲಿಸಿ ಎಂದು ಪ್ರಚಾರ ನಡೆಸುತ್ತಿದ್ದಾರೆ.

Advertisement

ಸಿದ್ಧಯ್ಯ ಸ್ವಾಮಿ ಕುಕನೂರು 

Advertisement

Udayavani is now on Telegram. Click here to join our channel and stay updated with the latest news.

Next