Advertisement

ಹಳ್ಳಿ ಗ್ರಂಥಾಲಯಗಳಿಗೆ ಹೈಟೆಕ್‌ ಸ್ಪರ್ಶ

10:20 AM Feb 23, 2020 | Lakshmi GovindaRaj |

ಬೆಂಗಳೂರು: ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಆಧುನಿಕ ಸ್ಪರ್ಶ ಕೊಟ್ಟು, ಅವುಗಳನ್ನು ಓದುಗ ಸ್ನೇಹಿ ಮತ್ತು ಜನಸ್ನೇಹಿ ಜ್ಞಾನ ಕೇಂದ್ರಗಳನ್ನಾಗಿ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ “ನೀಲನಕ್ಷೆ’ ರೂಪಿಸಿದೆ.

Advertisement

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿದ್ದ ಗ್ರಾಮೀಣ ಪ್ರದೇಶದ ಸುಮಾರು 5,766 ಗ್ರಂಥಾಲಯಗಳನ್ನು ಕಳೆದ ವರ್ಷ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿತ್ತು. ಅದರಂತೆ, ಈಗ ಗ್ರಂಥಾಲಯಗಳ ನಿರ್ವಹಣೆ ಗ್ರಾಮ ಪಂಚಾಯಿತಿಗಳ ಪಾಲಿಗೆ ಬಂದಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯಗಳಿಗೆ ಮೂಲಸೌಕರ್ಯಗಳನ್ನು ಹೆಚ್ಚಿಸಿ, ಹೊಸ ಪುಸ್ತಕಗಳು, ಕಂಪ್ಯೂಟರ್‌ಗಳು, ಪಿಠೊಪಕರಣಗಳು ಇತ್ಯಾದಿ ಸೌಕರ್ಯಗಳನ್ನು ಒದಗಿಸಲು, ಗ್ರಾಮದ ಯುವಕ-ಯುವತಿಯರು, ಗೃಹಿಣಿಯರು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಸದುಪಯೋಗವಾಗುವಂತೆ ಮಾಡಲು “ನೀಲನಕ್ಷೆ’ ರೂಪಿಸಲಾಗಿದೆ.

ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರದ ಹಂತದಲ್ಲಿ ರಾಜ್ಯ ಮಟ್ಟದಲ್ಲಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಸಲಹಾ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯ ಮಟ್ಟದ ಸಲಹಾ ಸಮಿತಿಯಲ್ಲಿ ಪಂಚಾಯತ್‌ರಾಜ್‌ ಇಲಾಖೆ ನಿರ್ದೇಶಕರ ನೇತೃತ್ವದಲ್ಲಿ ವಿವಿಧ ಐದು ಮಂದಿ ಸದಸ್ಯರಿದ್ದಾರೆ. ಪಂಚಾಯಿತಿ ಮಟ್ಟದ ಸಮಿತಿಗೆ ಆಯಾ ಪಂಚಾಯಿತಿಯ ಅಧ್ಯಕ್ಷರು ಮುಖಸ್ಥರಾಗಿರುತ್ತಾರೆ.

ಗ್ರಂಥಾಲಯಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜ್ಞಾನ ಕೇಂದ್ರಗಳಾಗಿ ಕೆಲಸ ಮಾಡಿದ್ದಲ್ಲಿ ಎಲ್ಲಾ ವರ್ಗದ ಜನರಿಗೆ ಅವಶ್ಯವಿರುವ ಮಾಹಿತಿಗಳು ಸ್ಥಳೀಯವಾಗಿ ಲಭ್ಯವಾಗುವಂತೆ ಮಾಡಬಹುದಾಗಿದೆ. ಅಲ್ಲದೇ ಸ್ಥಳೀಯ ಸಂಘ-ಸಂಸ್ಥೆಗಳು, ಗ್ರಾಮದ ಉದ್ಯೋಗಸ್ಥ ವ್ಯಕ್ತಿಗಳು, ಉದ್ಯಮಿಗಳಿಂದಲೂ ಸಹ ವಂತಿಕೆ ರೂಪದಲ್ಲಿ ನೆರವು ಪಡೆದುಕೊಳ್ಳಲು ಅವಕಾಶವಿರುತ್ತದೆ. ಈ ನಿಟ್ಟಿನಲ್ಲಿ ಎರಡೂ ಸಮಿತಿಗಳು ಕೆಲಸ ಮಾಡಲಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ಸಮಿತಿಯ ಜವಾಬ್ದಾರಿಗಳು: ರಾಜ್ಯ ಮಟ್ಟದ ಸಮಿತಿಯು ಗ್ರಂಥಾಲಯಗಳ ಕಟ್ಟಡ, ಪಿಠೊಪಕರಣ ಮತ್ತಿತರ ಮೂಲಸೌಕರ್ಯಗಳ ಸ್ವರೂಪ ಮತ್ತು ಗುಣಮಟ್ಟದ ನೀಲನಕ್ಷೆ ತಯಾರಿಸಬೇಕು. ಯಾವೆಲ್ಲ ಪುಸ್ತಕಗಳು ಇರಬೇಕು, ಡಿಜಿಟಲ್‌ ಮಾಡಿ ಯಾವ, ಯಾವ ಮಾಹಿತಿಗಳನ್ನು ಇರಿಸಬೇಕು ಎಂಬ ಬಗ್ಗೆ ಸಲಹೆ ನೀಡಬೇಕು.

ಓದುಗರ ಸಂಖ್ಯೆ ಹೆಚ್ಚಿಸಲು, ಓದುಗರ ಜೊತೆಗೆ ವಿಷಯವಾರು ಸಂವಾದ ಕಾರ್ಯಕ್ರಮ ಏರ್ಪಡಿಸಬೇಕು. ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ವ್ಯವಸ್ಥೆಗೆ ಸಲಹೆ ಕೊಡಬೇಕು. ಅದೇ ರೀತಿ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಯು ಗ್ರಂಥಾಲಯಗಳಿಗೆ ಸಮರ್ಪಕ ಕಟ್ಟಡ, ಅವಶ್ಯಕ ಪಿಠೊಪಕರಣ, ಪುಸ್ತಕ, ದಿನಪತ್ರಿಕೆ ನಿಯತಕಾಲಿಕೆ, ಕಂಪ್ಯೂಟರ್‌ಗಳನ್ನು ಲಭ್ಯವಾಗುವಂತೆ ಮಾಡಬೇಕು.

ಗ್ರಂಥಾಲಯಗಳಲ್ಲಿ ಉದ್ಯೋಗ ಹಾಗೂ ಮತ್ತಿತರ ಅಗತ್ಯ ಮಾಹಿತಿಗಳ ಸಿಗುವಂತೆ ವ್ಯವಸ್ಥೆ ಮಾಡಬೇಕು. ಸ್ಥಳೀಯ ಸಾಹಿತಿಗಳು, ಕ್ರೀಡಾಪಟುಗಳು ಹಾಗೂ ಇತರೆ ಕ್ಷೇತ್ರಗಳಸಾಧಕರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಸಬೇಕು. ಓದುಗರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು. ಗ್ರಂಥಾಲಯಗಳು ಸ್ಥಳೀಯ ಎಲ್ಲಾ ರೀತಿಯಿಂದಲೂ ಉಪಯುಕ್ತವಾಗುವಂತೆ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ದಾನಿಗಳಿಂದ ನೆರವು: ಗ್ರಂಥಾಲಯಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ, ಪಂಚಾಯಿತಿಗಳು ಆಸ್ತಿ ತೆರಿಗೆ ಜತೆಗೆ ಸಂಗ್ರಹಿಸುವ ಗ್ರಂಥಾಲಯ ಉಪಕರದ ಹಣ, ಗ್ರಾಮ ಪಂಚಾಯಿತಿಗಳು ಸ್ವಂತ ಸಂಪನ್ಮೂಲಗಳಿಂದ ಖರ್ಚು ವೆಚ್ಚಗಳನ್ನು ಭರಿಸಿಕೊಳ್ಳಬೇಕು. ಇದಲ್ಲದೆ, ಸ್ಥಳೀಯ ದಾನಿಗಳಿಂದ ಹಣ, ಪುಸ್ತಕ, ಕಂಪ್ಯೂಟರ್‌, ಪಿಠೊಪಕರಣ ಇತ್ಯಾದಿ ರೂಪದಲ್ಲಿ ನೆರವು ಪಡೆದುಕೊಳ್ಳಬಹುದು. ಎರಡೂ ಸಮಿತಿಗಳು ಕನಿಷ್ಠ ತಿಂಗಳಿಗೊಮ್ಮೆ ಸಭೆ ಸೇರಿ ಅವಶ್ಯಕ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next