Advertisement

ಭುಜಂಗ ಪಾರ್ಕ್‌ 2 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ

11:08 PM Nov 04, 2019 | mahesh |

ಉಡುಪಿ: ನಗರಸಭೆ ನಗರದ ಹೃದಯ ಭಾಗದಲ್ಲಿರುವ ಅಜ್ಜರಕಾಡು ಭುಜಂಗ ಪಾರ್ಕ್‌ ಸಮೀಪದ ಚಿಣ್ಣರ ಆಟದ ಉದ್ಯಾನವನಕ್ಕೆ ಹೈಟೆಕ್‌ ಸ್ಪರ್ಶ ನೀಡಿದ್ದು, ಇದೀಗ ಸಂಜೆಯಾದರೆ ಸಾಕು ಮಕ್ಕಳು ತಂಡೋಪತಂಡವಾಗಿ ಆಗಮಿಸಿ ಪಾರ್ಕ್‌ನಲ್ಲಿ ನಕ್ಕು ನಲಿಯುತ್ತಿದ್ದಾರೆ.

Advertisement

15 ಲ.ರೂ. ವೆಚ್ಚದಲ್ಲಿ ಜಿಮ್‌ ಪರಿಕರ
ಅಜ್ಜರಕಾಡು ಭುಜಂಗ ಪಾರ್ಕಿನ ಎಡ ಭಾಗದಲ್ಲಿ ಚಿಣ್ಣರ ಆಟದ ಉದ್ಯಾನವನ್ನು ನಗರಸಭೆ ಅಮೃತ್‌ ಯೋಜನೆಯಡಿ ಸುಮಾರು 15 ಲ.ರೂ. ವೆಚ್ಚದಲ್ಲಿ ಮಕ್ಕಳ ದೈಹಿಕ ವ್ಯಾಯಾಮ ಮಾಡಲು ಅನುಕೂಲವಾಗುವಂತೆ ಜಿಮ್‌ ಪರಿಕರ ಬಳಸಲಾಗಿದೆ.

ಜಿಮ್‌ ಪರಿಕರ
ಚಿಣ್ಣರ ಉದ್ಯಾನದಲ್ಲೀಗ ಬಯಲು ವ್ಯಾಯಾಮ ಕೇಂದ್ರವಾಗಿ ಪರಿವರ್ತನೆಯಾಗಿದೆ. ಮಕ್ಕಳಿಗಾಗಿ ಲೆಗ್‌ ಪ್ರಸ್‌, ಸೈಕ್ಲಿಂಗ್‌, ಶೋಲ್ಡರ್‌ ಪ್ರಸ್‌, ಸ್ವೆಪ್‌ ಟ್ರೈನರ್‌, ಚೆಸ್ಟ್‌ ಪ್ರಸ್‌ ಸೇರಿಂತೆ 10ಕ್ಕೂ ಅಧಿಕ ಪರಿಕರಗಳನ್ನು ವ್ಯವಸ್ಥಿತವಾಗಿ ಅಳವಡಿಸಲಾಗಿದೆ.

ಮೂಲಭೂತ ಸೌಲಭ್ಯ
ಹಿಂದಿನ ಮಕ್ಕಳ ಪಾರ್ಕ್‌ ಪರಿಕರಗಳು ಸಂಪೂರ್ಣವಾಗಿ ಶಿಥಿಲವಾಗಿದ್ದವು. ಯಾವುದೇ ರೀತಿ ಯಾದ ಮೂಲಭೂತ ಸೌಕರ್ಯಗಳು ಇರಲಿಲ್ಲ. ಇದೀಗ ಮಕ್ಕಳ ಪಾರ್ಕ್‌ ಜತೆಗೆ ಭುಜಂಗ ಪಾರ್ಕ್‌ಗೆ ವಿದ್ಯುತ್‌ ದೀಪಗಳು ಅಳವಡಿಸಿದ್ದು, ಇದರಿಂದಾಗಿ ಮಕ್ಕಳು ಹೆಚ್ಚಿನ ಸಮಯದ ವರೆಗೆ ಯಾವುದೇ ಭಯವಿಲ್ಲದೆ ಸಮಯ ಕಳೆಯುತ್ತಿದ್ದಾರೆ. ಮುಂದಿನ ದಿನದಲ್ಲಿ ಪಾರ್ಕ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ನಗರಸಭೆ ಚಿಂತನೆ ನಡೆಸುತ್ತಿದೆ.

2 ಕೋ.ರೂ. ವೆಚ್ಚದಲ್ಲಿ ಪಾರ್ಕ್‌ ಅಭಿವೃದ್ಧಿ
ಪ್ರವಾಸೋದ್ಯಮ ಇಲಾಖೆಯಿಂದ 1.50 ಕೋ.ರೂ ಹಾಗೂ ನಗರಸಭೆಯಿಂದ 50 ಲ.ರೂ ಸೇರಿದಂತೆ ಒಟ್ಟು 2 ಕೋ.ರೂ. ವೆಚ್ಚದಲ್ಲಿ ಅಜ್ಜರಕಾಡು ಭುಜಂಗ ಪಾರ್ಕ್‌ ಅಭಿವೃದ್ಧಿಯಾಗಲಿದೆ. ನವೆಂಬರ್‌ ತಿಂಗಳಲ್ಲಿ ಪಾರ್ಕ್‌ನಲ್ಲಿ ಸುಮಾರು 50 ಲ.ರೂ. ವೆಚ್ಚದಲ್ಲಿ ವಿಕಲಚೇತನರಿಗೆ ಅಗತ್ಯವಿರುವ ಪರಿಕರ ಅಳವಡಿಕೆ ಕಾಮಗಾರಿಗೆ ಚಾಲನೆ ದೊರೆಯಲಿದೆ.

Advertisement

70 ಲ.ರೂ. ಹೊರಾಂಗಣ ಜಿಮ್‌
ಭುಜಂಗ ಪಾರ್ಕ್‌ನಲ್ಲಿ ಹಿರಿಯ ನಾಗರಿಕರಿಗೆ ವ್ಯಾಯಾಮ ಹಾಗೂ ದೈಹಿಕ ಕಸರತ್ತು ಮಾಡಲು ಅನುಕೂಲವಾಗುವಂತೆ 70 ಲ.ರೂ. ವೆಚ್ಚದಲ್ಲಿ ಹೊರಾಂಗಣ ಜಿಮ್‌ ನಿರ್ಮಾಣವಾಗಲಿದೆ.

ಈಗ ಭಯವಿಲ್ಲ
ಹಿಂದೆ ಉದ್ಯಾನವನದಲ್ಲಿ ಮಕ್ಕಳನ್ನು ಆಡುವುದಕ್ಕೆ ಬಿಡಲು ಭಯವಾಗುತ್ತಿತ್ತು. ಇದೀಗ ಅಪಾಯಕಾರಿ ಆಟಗಳ ಪರಿಕರ ಬದಲಿಸಿ ದೈಹಿಕ ವ್ಯಾಯಾಮಕ್ಕೆ ಸಹಾಯಕವಾದ ಜಿಮ್‌ ಪರಿಕರ ಆಳವಡಿಸಿರುವುದು ಸಂತೋಷ ತಂದಿದೆ.
-ಪಲ್ಲವಿ ಸಂತೋಷ್‌, ಉಡುಪಿ ನಿವಾಸಿ

15 ಲ.ರೂ. ಅನುದಾನ
ಚಿಣ್ಣರ ಉದ್ಯಾನವನದಲ್ಲಿ ಮಕ್ಕಳ ಆಟಕ್ಕೆ ಹಾಗೂ ದೈಹಿಕ ವ್ಯಾಯಾಮಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದಕ್ಕೆ ಅಮೃತ್‌ ಯೋಜನೆಯಡಿ ಸುಮಾರು 15 ಲ.ರೂ. ಅನುದಾನ ಬಳಸಿಕೊಳ್ಳಲಾಗಿದೆ.
– ಆನಂದ ಸಿ. ಕೊಲ್ಲೋಳಿಕರ್‌, ಪೌರಾಯುಕ್ತ, ಉಡುಪಿ ನಗರಸಭೆ

ಇನ್ನಷ್ಟು ಅಭಿವೃದ್ಧಿ ಯೋಜನೆ
ಅಜ್ಜರಕಾಡು ಭುಜಂಗ ಪಾರ್ಕ್‌ ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆಯಿದೆ. ಆದರೆ ನಗರಸಭೆಯಲ್ಲಿ ಜನಪ್ರತಿನಿಧಿಗಳು ಆಡಳಿತ ವಹಿಸಿಕೊಳ್ಳದ ಕಾರಣ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ.
-ರಶ್ಮಿ ಭಟ್‌, ನಗರಸಭೆ ಸದಸ್ಯೆ, ಅಜ್ಜರಕಾಡು ವಾರ್ಡ್‌

ಚಿಟ್ಟೆ ಪಾರ್ಕ್‌: ಚರ್ಚೆ
ಉಡುಪಿ ಭುಜಂಗ ಪಾರ್ಕಿನಲ್ಲಿ ಚಿಟ್ಟೆ ಪಾರ್ಕ್‌ ನಿರ್ಮಿಸುವ ಕುರಿತು ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.
-ಕೆ. ರಘುಪತಿ ಭಟ್‌, ಶಾಸಕ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next