Advertisement

ಏಳುಕೊಳ್ಳದ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ಗುಡ್ಡಕ್ಕೆ ಹೈಟೆಕ್‌ ಸ್ಪರ್ಶ

06:10 PM Feb 17, 2022 | Team Udayavani |

ಬೆಳಗಾವಿ: ಉತ್ತರ ಕರ್ನಾಟಕದ ಆರಾಧ್ಯ ದೇವತೆ ಏಳುಕೊಳ್ಳದ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಹೈಟೆಕ್‌ ಸ್ಪರ್ಶ ನೀಡಲು ಸಿದ್ಧತೆ ನಡೆದಿದ್ದು, ದೇಗುಲದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲು ಮಾಸ್ಟರ್‌ ಪ್ಲ್ಯಾನ್‌ ರೆಡಿ ಆಗುತ್ತಿದೆ.

Advertisement

ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಅತಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಭಕ್ತರ ಸಂಖ್ಯೆ ದ್ವಿಗುಣಗೊಂಡರೂ ಸೌಕರ್ಯಗಳು ಮಾತ್ರ ಮರೀಚಿಕೆ ಆಗಿವೆ. ಭಕ್ತರಿಗೆ ಅನುಕೂಲ ಒದಗಿಸಬೇಕೆಂಬ ಉದ್ದೇಶದಿಂದ ಸರ್ಕಾರ ಕಾಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ. ರಾಜ್ಯದ 25 ದೇವಸ್ಥಾನಗಳ ಪೈಕಿ ಉತ್ತರ ಕರ್ನಾಟಕದ ಆರಾಧ್ಯ ದೇವತೆ ಏಳುಕೊಳ್ಳದ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವೂ ಒಂದು.

ಈಗಾಗಲೇ ದೇವಸ್ಥಾನ ಆವರಣದ ಸಂಪೂರ್ಣ ಪ್ರದೇಶ ಸಮೀಕ್ಷೆ ನಡೆಸಲಾಗಿದೆ. ಹುಬ್ಬಳ್ಳಿಯ ವಿಜಯನ್‌ ಸೊಲ್ಯುಷನ್‌ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ದೇವಸ್ಥಾನದ ಸಾವಿರ ಎಕರೆ ಪ್ರದೇಶದಲ್ಲಿ ಪ್ರದೇಶಗಳಲ್ಲಿ ಅಗತ್ಯ ಸೌಕರ್ಯ ಒದಗಿಸಬೇಕು ಎಂಬುದರ ಕುರಿತು ಮಾಸ್ಟರ್‌ ಪ್ಲ್ಯಾನ್‌ ರೆಡಿ ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಎಲ್ಲ ಸೌಲಭ್ಯ ಒದಗಿಸಿ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.ಮುಂದಿನ 50-100 ವರ್ಷಗಳಿಗೆ ಅಗತ್ಯ ಇರುವ ಸೌಲಭ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಶೌಚಾಲಯ ಬ್ಲಾಕ್‌ಗಳು: ಮೂಲ ಸೌಕರ್ಯಗಳಲ್ಲಿ ಒಂದಾದ ಶೌಚಾಲಯ ಬ್ಲಾಕ್‌ಗಳ ನಿರ್ಮಾಣ ಆಗಲಿವೆ. ಎಪಿಎಂಸಿ ಕಡೆಯಿಂದ, ಉಗರಗೋಳ ಕಡೆಯಿಂದ ಬರುವ ಭಕ್ತರಿಗೆ ಸ್ನಾನ ಗೃಹ, ಶೌಚಾಲಯಗಳು ಆಗಲಿವೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಜೋಗುಳಬಾವಿ ಕಡೆಯಿಂದ ಬರುವವರಿಗೆ 100 ಪುರುಷರು ಮತ್ತು 100 ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣವಾಗುತ್ತಿದೆ.

ಎಣ್ಣೆ ಹೊಂಡದಲ್ಲಿ ಪುಣ್ಯ ಸ್ನಾನ: ಪಶ್ಚಿಮ ಭಾಗದಲ್ಲಿ ಎಪಿಎಂಸಿ ನಾಕಾ ಹಾಗೂ ಜಮದಗ್ನಿ ಕಡೆಗೆ ಬರಲು ಕೂಡು ರಸ್ತೆ ಮತ್ತು ರಿಂಗ್‌ ರೋಡ್‌ಗಳನ್ನು ನಿರ್ಮಾಣ ಮಾಡಲು ಮಾಸ್ಟರ್‌ ಪ್ಲ್ಯಾನ್‌ನಲ್ಲಿ ಅಳವಡಿಸಲಾಗಿದೆ. ಗುಡ್ಡಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಎಣ್ಣೆ ಹೊಂಡದಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ.

Advertisement

ಆದರೆ ಇಲ್ಲಿ ಕೇವಲ 300-500 ಜನರಿಗೆ ಮಾತ್ರ ಅವಕಾಶ ಇದೆ. ದೇವಸ್ಥಾನಕ್ಕೆ 30-40 ಸಾವಿರವರೆಗೂ ಜನ ಬರುವುದರಿಂದ ಹೀಗಾಗಿ ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಖಾಲಿ ಜಾಗದಲ್ಲಿ ಕೃತಕ ಕೆರೆ (ಹೊಂಡ) ಜೋಗುಳಬಾವಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಾಧ್ಯವಾದರೆ ಎಣ್ಣೆ ಹೊಂಡದ ನೀರನ್ನು ಸೇರಿಸಿ ಡ್ಯಾಂ ಮೂಲಕ ನೀರು ಪೂರೈಸುವ ಕಾರ್ಯ ಮಾಡಲಾಗುವುದು.

ಪಾದಗಟ್ಟೆಗಳ ನಿರ್ಮಾಣ: ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರು ಈ ಹಿಂದೆ ಪಾದಗಟ್ಟೆಗೆ ನಮಸ್ಕರಿಸಿ ಒಳಗೆ ಬರುತ್ತಿದ್ದರು. ಈಗಂತೂ ಭಂಡಾರ-ಕುಂಕುಮವನ್ನು ಭಕ್ತರು ದೇವಸ್ಥಾನದ ಒಳಗೆ ತರುತ್ತಿದ್ದಾರೆ. ಇದನ್ನು ತಡೆಯಲು ಬಳಿಗಾರ ಕಟ್ಟೆ, ಎಪಿಎಂಸಿ ರೋಡ್‌, ಮಾತಂಗಿ ರಸ್ತೆಯಲ್ಲಿ ಇರುವ ಪಾದಗಟ್ಟೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ ಈ ಪಾದಗಟ್ಟೆಗಳಲ್ಲಿಯೇ ಭಂಡಾರ-ಕುಂಕುಮ ಹಾಕಿ ಬರಬೇಕು.ದೇವಸ್ಥಾನದಲ್ಲಿ ಎಲ್ಲಿ ಬೇಕಾದಲ್ಲಿ ಚೆಲ್ಲುವಂತಿಲ್ಲ. ಗುಡ್ಡಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಪಡ್ಡಲಗಿ ತುಂಬುವ ಸಂಪ್ರದಾಯ ಇದೆ. ಸದ್ಯ ಭಕ್ತರು ಎಲ್ಲಿ ಬೇಕಾದಲ್ಲಿ ಪಡ್ಡಲಗಿ ತುಂಬುತ್ತಾರೆ. ಈ ಸಂಪ್ರದಾಯ ಅಚ್ಚುಕಟ್ಟಾಗಿ ಆಗುವಂತೆ ಮಾಡಲು ಸಿದ್ಧತೆ ನಡೆದಿದೆ.

ಸಾವಿರಾರು ಜನ ಒಂದೇ ಕಡೆಗೆ ಪಡ್ಡಲಗಿ ತುಂಬುವ ವ್ಯವಸ್ಥೆ ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಸೇರಿದ 34 ಕೋಟಿ ರೂ. ಹಣ ಇದೆ. ಕೋವಿಡ್‌ ನಿರ್ಬಂಧ ಹೀಗೆಯೇ ಮುಂದುವರಿದರೆ ಇದರಲ್ಲಿಯ 14 ಕೋಟಿ ರೂ. ತೆಗೆದಿಡಲಾಗುವುದು. ಉಳಿದದ್ದರಲ್ಲಿ 10 ಕೋಟಿ ರೂ. ಮಾಸ್ಟರ್‌ ಪ್ಲ್ಯಾನ್‌ನಲ್ಲಿ ವೆಚ್ಚ ಮಾಡಲಾಗುವುದು. ಈ ಪರಿಕಲ್ಪನೆ ಇಟ್ಟುಕೊಂಡು ಮಾಸ್ಟರ್‌ ಪ್ಲ್ಯಾನ್‌ ಮಾಡಲಾಗುತ್ತಿದೆ.

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ವರ್ಷಪೂರ್ತಿ ಜಾತ್ರೆ, ಉತ್ಸವಗಳು ನಡೆಯುತ್ತವೆ. ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹುಣ್ಣಿಮೆಗಂತೂ ಭಕ್ತ ಸಾಗರವೇ ಹರಿದು ಬರುತ್ತದೆ. ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಹೆಚ್ಚಿದೆ. ಹೀಗಾಗಿ ಈ ಎಲ್ಲ ಅನಾನುಕೂಲತೆ ಸರಿಪಡಿಸಲು ರಾಜ್ಯ  ಸರ್ಕಾರ ಕಾಶಿ ಮಾದರಿಯಲ್ಲಿ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಪರಿಕಲ್ಪನೆಯಂತೆ ದೇವಸ್ಥಾನ ಅಭಿವೃದ್ಧಿಗೊಂಡರೆ ಈ ಭಾಗದಲ್ಲಿ ಪ್ರವಾಸೋದ್ಯಮ ಮತ್ತಷ್ಟು ಕ್ರಿಯಾಶೀಲವಾಗಲಿದೆ. ದೇವಸ್ಥಾನದ ಗುಡ್ಡದಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚಾದಂತೆ ಭಕ್ತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಮೂಲ ಸೌಕರ್ಯ ಒದಗಿಸಿ ಈ ಭಾಗದ ಭಕ್ತರ ಬೇಡಿಕೆ ಈಡೇರಿಸಿದಂತಾಗುತ್ತದೆ.

ಮಾಸ್ಟರ್‌ ಪ್ಲ್ಯಾನ್‌ನಲ್ಲಿ ಏನಿದೆ?
*ಎರಡು ಬ್ಲಾಕ್‌ ಶೌಚಾಲಯ ನಿರ್ಮಾಣ
*ಸ್ನಾನ ಗೃಹ ನಿರ್ಮಾಣ
*ಮೂರು ಕಡೆಗೆ ಎಣ್ಣೆ ಹೊಂಡ ನಿರ್ಮಾಣ
*ಪಾದಗಟ್ಟೆಗಳ ರಸ್ತೆ ಅಭಿವೃದ್ಧಿ
*ಕೂಡು ರಸ್ತೆ, ರಿಂಗ್‌ ರೋಡ್‌ ನಿರ್ಮಾಣ
*ಒಂದೇ ಕಡೆಗೆ ಪಡ್ಡಲಗಿ ತುಂಬುವ ವ್ಯವಸ್ಥೆ

ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಮಾಸ್ಟರ್‌ ಪ್ಲ್ಯಾನ್‌ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಇರುವ ಮೂಲ ಸೌಕರ್ಯ ಒದಗಿಸಲಾಗುವುದು. ಭಕ್ತರಿಗೆ ಅನುಕೂಲ ಆಗುವ ದೃಷ್ಟಿಯಿಂದ ವ್ಯವಸ್ಥೆ ಮಾಡಲಾಗುತ್ತಿದೆ. ಇಡೀ ಗುಡ್ಡಕ್ಕೆ ಆಧುನಿಕ ಸ್ಪರ್ಶ ನೀಡಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು.

ರವಿ ಕೋಟಾರಗಸ್ತಿ,
ಕಾರ್ಯ ನಿರ್ವಾಹಕ ಅಧಿಕಾರಿ, ಯಲ್ಲಮ್ಮ ದೇವಸ್ಥಾನ, ಸವದತಿ

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next