Advertisement

ಸರಕಾರಿ ವಸತಿಗೃಹಗಳಿಗೆ ಹೈಟೆಕ್‌ ಸ್ಪರ್ಶ

02:54 PM Oct 16, 2017 | Team Udayavani |

ಮಹಾನಗರ: ಸರಕಾರಿ ಅಧಿಕಾರಿ ಅಥವಾ ನೌಕರರ ವಸತಿ ಗೃಹಗಳು ಎಂದಾಗ ಶಿಥಿಲವಾದ ಗೋಡೆ, ಮುರಿದ ಗೇಟ್‌, ಸೋರುವ ಮಾಡು, ಇನ್ನೇನು ಮುರಿದು ಬೀಳುವ ಸ್ಥಿತಿಯ ಕಟ್ಟಡ… ನೆನಪಿಗೆ ಬರುವುದು ಸಹಜ. ಸುದೀರ್ಘ‌ ಕಾಲದಿಂದ ಕಂಡುಬರುತ್ತಿದ್ದ ಇಂತಹ ಪರಿಸ್ಥಿತಿ ಈಗ ನಿಧಾನವಾಗಿ ಬದಲಾವಣೆಯ ದಾರಿಗೆ ಒಗ್ಗಿಕೊಳ್ಳುತ್ತಿದೆ. ಸರಕಾರಿ ಅಧಿಕಾರಿಗಳ ವಸತಿಗೃಹಗಳೂ ಹೈಟೆಕ್‌ ಸ್ಪರ್ಶವನ್ನು ಪಡೆಯತೊಡಗಿವೆ.

Advertisement

ಮಂಗಳೂರಿನಲ್ಲಿ ಇಂತಹ ವಿನೂತನ ಕೆಲಸಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ಕೆಲವು ವಸತಿಗೃಹಗಳಿಗೆ ಅತ್ಯಾಧುನಿಕ ಸ್ಪರ್ಶ ನೀಡುವ ಕಾರ್ಯ ಆರಂಭಿಸಿದೆ. ಈಗಿರುವ ಹಳೆ ಕಟ್ಟಡಗಳನ್ನು ಕೆಡವಿ ಆಧುನಿಕ ಮಾದರಿಯ ಸುಸಜ್ಜಿತ ವಸತಿ ಗೃಹ ಹಾಗೂ ಫ್ಲ್ಯಾಟ್‌ಗಳ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ.

ನಗರದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಪ್ರತ್ಯೇಕ ವಸತಿ ಬದಲು, ಹಳೆ ವಸತಿ ಗೃಹಗಳನ್ನು ಕೆಡವಿ ಹೊಸ ಫ್ಲ್ಯಾಟ್‌ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಇದರಂತೆ, ಉರ್ವಸ್ಟೋರ್‌ನಲ್ಲಿ ಈಗಾಗಲೇ 6 ವಸತಿಗೃಹ ಇರುವ ಒಂದು ಫ್ಲ್ಯಾಟ್‌ ನಿರ್ಮಾಣವಾಗಿದೆ. ಇದೇ ಮಾದರಿಯ ಇನ್ನು 4 ಫ್ಲ್ಯಾಟ್‌ಗಳಿಗೆ ಅನುದಾನ ಮಂಜೂರಾಗಿದೆ. ನಗರದಲ್ಲಿ ಒಟ್ಟು 28 ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದು, ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಹ್ಯಾಟ್‌ಹಿಲ್‌ನಲ್ಲಿ 8 ಕೋಟಿ ರೂ.ವೆಚ್ಚದಲ್ಲಿ 4 ಅಂತಸ್ತಿನ 3,650 ಚ.ಮೀ. ವಿಸ್ತೀರ್ಣದ ಫ್ಲ್ಯಾಟ್‌ನ ಕಾಮಗಾರಿ ಪ್ರಗತಿಯಲ್ಲಿದೆ.

ಲೋಕೋಪಯೋಗಿ ಇಲಾಖೆಯು ಸ್ವತಃ ಆಧುನಿಕ ಮಾದರಿಯ ವಸತಿ ನಿರ್ಮಾಣಕ್ಕೆ ಮುಂದಾಗಿದೆ. ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಹ್ಯಾಟ್‌ಹಿಲ್‌ನಲ್ಲಿ 1.75 ಕೋಟಿ  ವೆಚ್ಚದಲ್ಲಿ 4 ವಸತಿ ಗೃಹದ ಫ್ಲ್ಯಾಟ್‌, ಅಧೀಕ್ಷಕ ಹಾಗೂ ಕಾರ್ಯಪಾಲಕ ಅಭಿಯಂತರರಿಗೆ 1.10 ಕೋಟಿ ರೂ. ವೆಚ್ಚದಲ್ಲಿ 3 ಬೆಡ್‌ರೂಮಿನ 141.50 ಚದರ ಮೀ. ವಿಸ್ತೀರ್ಣದ ವಸತಿಗೃಹ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. 

ನಗರದ ಹ್ಯಾಟ್‌ಹಿಲ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ನಿವಾಸವೂ ಹಿಂದೆ ಶಿಥಿಲಾವಸ್ಥೆಯಲ್ಲಿತ್ತು. ಸರಕಾರವು ನ್ಯಾಯಾಂಗ ಇಲಾಖೆಗೆ ಆದ್ಯತೆ ಕಲ್ಪಿಸಿ ಹೊಸ ವಸತಿ ನಿರ್ಮಾಣಕ್ಕೆ ಮುಂದಾಗಿತ್ತು. ಇದೀಗ ಇಲ್ಲಿ ಅತ್ಯಾಧುನಿಕ ಮಾದರಿಯ ನಿವಾಸ ನಿರ್ಮಾಣವಾಗಿದೆ. ಲೋಕೋಪಯೋಗಿ ಇಲಾಖೆ 1.35 ಕೋ.ರೂ.ವೆಚ್ಚದಲ್ಲಿ ವಸತಿ ಗೃಹವನ್ನು ನಿರ್ಮಿಸಿದೆ. ವಸತಿ ಗೃಹದ ತಳ ಅಂತಸ್ತು 255 ಚದರ ಮೀ.ಹಾಗೂ ಪ್ರಥಮ ಅಂತಸ್ತು 398 ಚದರ ಮೀ. ವಿಸ್ತೀರ್ಣವಿದ್ದು, ಕಟ್ಟಡ ಪೂರ್ಣಗೊಂಡಿದೆ.

Advertisement

ವಾಸಕ್ಕೆ ಯೋಗ್ಯವಿರದ ವಸತಿಗೃಹಗಳು!
ಮಂಗಳೂರಿನ ಹ್ಯಾಟ್‌ಹಿಲ್‌ನಲ್ಲಿ ಕಂದಾಯ, ಕಾನೂನು, ಆರೋಗ್ಯ, ಕೃಷಿ, ವಾಣಿಜ್ಯ , ಲೋಕೋಪಯೋಗಿ ಮುಂತಾದ ಇಲಾಖೆಗಳ ಹಿರಿಯ ಅಧಿಕಾರಿಗಳ 40 ವಸತಿ ಗೃಹಗಳಿವೆ. ಉರ್ವ ಸ್ಟೋರ್‌, ಕುಂಜತ್ತಬೈಲ್‌, ಬೋಂದೆಲ್‌ ಪರಿಸರದಲ್ಲಿ 500ಕ್ಕೂ ಅಧಿಕ ಸರಕಾರಿ ನೌಕರರ ವಸತಿಗೃಹಗಳಿವೆ. ಈ ಪೈಕಿ ಶೇ. 50ಕ್ಕೂ ಅಧಿಕ ವಸತಿಗೃಹಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂಬ ವರದಿಯಿದೆ. ಅನುದಾನದ ಕೊರತೆ, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಇವುಗಳ ದುರಸ್ತಿ ಕಾರ್ಯ ನಡೆದಿಲ್ಲ. ನಗರದಲ್ಲಿರುವ ಇಂತಹ ವಸತಿಗೃಹಗಳ ದುರಸ್ತಿ ಅಥವಾ ಹೊಸ ನಿರ್ಮಾಣಕ್ಕೆ ಇಲಾಖೆಗಳಿಂದ ಹಣ ಬಿಡುಗಡೆಯಾದರೆ ಮಾತ್ರ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಡೆಸಬಹುದಾಗಿದೆ.

ಹಳೆ ವಸತಿ ಗೃಹಗಳಿಗೆ ಮುಕ್ತಿ
ಕಾನೂನು ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗೆ ಹೊಸ ಮಾದರಿಯ ವಸತಿ ಗೃಹ/ಫ್ಲ್ಯಾಟ್‌ ನಿರ್ಮಾಣ ಕಾರ್ಯ ಪ್ರಸ್ತುತ ನಡೆಯುತ್ತಿದೆ. ಹಳೆಯ ಮನೆಗಳಿಗೆ ಮುಕ್ತಿ ನೀಡಿ ಅವುಗಳ ವ್ಯಾಪ್ತಿಯಲ್ಲಿ ನವೀನ ಮಾದರಿಯ ಫ್ಲ್ಯಾಟ್‌ ನಿರ್ಮಾಣ ಕಾರ್ಯ ಆರಂಭಿಸಲಾಗುವುದು.ಲೋಕೋಪಯೋಗಿ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ. ಲಭ್ಯ ಅನುದಾನದಲ್ಲಿ ಹಳೆ ವಸತಿಗೃಹಗಳ ದುರಸ್ತಿ ಕಾರ್ಯವನ್ನೂ ನಡೆಸಲಾಗುತ್ತಿದೆ. 
ಕೆ.ವಿ. ರವಿಕುಮಾರ್‌,
ಸಹಾಯಕ ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next