Advertisement

ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಹೈಟೆಕ್‌ ಸ್ಪರ್ಶ

04:52 PM Oct 08, 2018 | |

ಗದಗ: ರಾಜ್ಯದ ಫಾಸ್ಟ್‌ ಗ್ರೋವಿಂಗ್‌ ಝೂ ಎಂದೇ ಕರೆಯಿಸಿಕೊಳ್ಳುತ್ತಿರುವ ಇಲ್ಲಿನ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಇದೀಗ ಹೈಟೆಕ್‌ ಸ್ಪರ್ಶ ನೀಡಲಾಗುತ್ತಿದೆ. ಮೃಗಾಲಯಕ್ಕೆ ಆಗಮಿಸುವ ಸಂದರ್ಶಕರು ಹಾಗೂ ಪ್ರಾಣಿಗಳ ಚಲನವಲನ ಮೇಲೆ ನಿಗಾ ಇರಿಸಲು ಸಿಸಿ ಕ್ಯಾಮರಾಗಳ ಅಳವಡಿಸುವುದರೊಂದಿಗೆ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನದ ಸೇವೆ ಒದಗಿಸಲು ಮುಂದಾಗಿದೆ.

Advertisement

ಸಿಸಿ ಕ್ಯಾಮರಾ ಕಣ್ಗಾವಲು: ವನ್ಯಜೀವಿಗಳಿಗೆ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಮೃಗಾಲಯ ಅಭಿವೃದ್ಧಿ ಪ್ರಾಧಿ ಕಾರ ಸುಮಾರು 4 ಲಕ್ಷ ರೂ. ಮೊತ್ತದಲ್ಲಿ ಆಯ್ದ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 20 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಇವು ಹಗಲಿರುಳು 40 ಮೀಟರ್‌ ದೂರದವರೆಗೆ ದೃಶ್ಯ ಸೆರೆ ಹಿಡಿಯಬಹುದಾಗಿದ್ದು, ಒಂದು ತಿಂಗಳ ಕಾಲ ದತ್ತಾಂಶ ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ ಎನ್ನಲಾಗಿದೆ.ಈ ಪೈಕಿ ಹುಲಿ ಪಂಜರದಲ್ಲಿ 2, ಚಿರತೆ ಬೋನಿನಲ್ಲಿ 1, ಪಕ್ಷ ಪಥದಲ್ಲಿ 2, ಇನ್ನುಳಿದ 15 ಕ್ಯಾಮರಾಗಳನ್ನು ಕರಡಿ ಬೋನ್‌, ಮೊಸಳೆ ಹೊಂಡ, ಮಕ್ಕಳ ಉದ್ಯಾನ ಸೇರಿದಂತೆ ವಿವಿಧೆಡೆ ಅಳವಡಿಸಲಾಗುತ್ತಿದೆ. ಮೃಗಾಲಯದ ವನ್ಯ ಜೀವಿಗಳಿಗೆ ಕಲ್ಲು ಎಸೆಯುವುದು, ಅವುಗಳ ಗಮನ ಸೆಳೆಯಲು ಕೂಗುವುದು ನಿಷಿದ್ಧ. ಈ ನಿಟ್ಟಿನಲ್ಲಿ ಸಿಬ್ಬಂದಿ ಮೈಯಲ್ಲಾ ಕಣ್ಣಾಗಿಸಿದ್ದರೂ ಕೆಲವೊಮ್ಮೆ ಈ ರೀತಿಯ ಘಟನೆಗಳು ನಡೆದು ಹೋಗುತ್ತವೆ. ಎರಡು ತಿಂಗಳ ಹಿಂದೆ ಯಾರೋ ಜೇನುಗೂಡಿಗೆ ಕಲ್ಲು ಹೊಡೆದಿದ್ದರಿಂದ ಇಬ್ಬರಿಗೆ ಜೇನು ಕಚ್ಚಿ ಗಾಯಗೊಳಿಸಿದ್ದವು.

ಅತ್ಯಾಧುನಿಕತೆಗೆ ಒತ್ತು: ಮೃಗಾಲಯದ ಪಕ್ಷಿ ಪಥ ಸೇರಿದಂತೆ ಅಗತ್ಯವಿರುವೆಡೆ 6 ಸೌರ ವಿದ್ಯುತ್‌ ದೀಪ ಅಳವಡಿಸಲಾಗಿದೆ. ವಿದ್ಯುತ್‌ ಪೂರೈಕೆ ಸ್ಥಗಿತಗೊಂಡರೂ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆಗೆ ಒತ್ತು ನೀಡಲಾಗಿದೆ. ಜಿಲ್ಲಾಡಳಿತ ಒದಗಿಸಿರುವ ಬ್ಯಾಟರಿ ಚಾಲಿತ ಸ್ಟಾಂಡಿಂಗ್‌ ಬೈಕ್‌ ಯುವಜನರನ್ನು ಸೆಳೆಯುತ್ತಿದೆ. ಅದರೊಂದಿಗೆ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಮೈಸೂರು ಝೂ ದತ್ತು ಸ್ವೀಕಾರ ನಿಧಿ ಯಡಿ 6.5 ಲಕ್ಷ ರೂ. ಮೊತ್ತದಲ್ಲಿ 8 ಆಸನಗಳ ಬ್ಯಾಟರಿ ಚಾಲಿತ ವಾಹನ ಖರೀದಿಸಲಾಗುತ್ತಿದೆ.

ಝೂ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಬನ್ನೇರುಘಟ್ಟ, ಮೈಸೂರು ಹಾಗೂ ಶಿವಮೊಗ್ಗ ಮೃಗಾಲಯಗಳ ನಂತರದ ಸ್ಥಾನ ಗದುಗಿಗೆ ಲಭಿಸುತ್ತಿದೆ ಎಂಬುದು ಹೆಮ್ಮೆಯ ಸಂಗತಿ. ಪ್ರಾಧಿ ಕಾರದಿಂದಲೇ ಬ್ಯಾಟರಿ ಚಾಲಿತ ಕಾರಿಗೆ ತಲಾ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. ಸ್ಟಾಂಡಿಗ್‌ ಸ್ಕೂಟರ್‌ಗೆ ಶುಲ್ಕ ನಿಗದಿಗೊಳಿಸಬೇಕಿದೆ. ನಮ್ಮ ಮೃಗಾಲಯದ ಆದಾಯಕ್ಕಿಂತ ಖರ್ಚು ಹೆಚ್ಚಿದೆ. ಶುಲ್ಕ ಹಾಗೂ  ಪ್ರಾಣಿ ದತ್ತು ಸ್ವೀಕಾರ ಯೋಜನೆಯಿಂದ ಬರುವ ಆದಾಯದ ಮೂಲಕ ಮೃಗಾಲಯ ಸ್ವಾವಲಂಬಿಯನ್ನಾಗಿಸುವ ಪ್ರಯತ್ನ ನಡೆದಿದೆ.
 ಸೋನಲ್‌ ವೃಷ್ಣಿಕ್ಷೀರಸಾಗರ,
 ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ

ಸಣ್ಣ ಮೃಗಾಲಯವೆಂಬ ಪಟ್ಟ
1976ರಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ ಕಿರು ವನ್ಯಜೀವಿ ಸಂರಕ್ಷಣಾ ಕೇಂದ್ರ ಸ್ಥಾಪಿಸಿದೆ. ಅನಂತರ ಕಿರು ಮೃಗಾಲಯವನ್ನಾಗಿ ಪರಿವರ್ತಿಸಲಾಗಿದೆ. ಇತ್ತೀಚೆಗೆ ಭಾರತ ಸರಕಾರದ ಮೃಗಾಲಯ ಪ್ರಾಧಿ ಕಾರದಿಂದ ಸಣ್ಣ
ಮೃಗಾಲಯ ಎಂಬ ಪಟ್ಟವೂ ಒಲಿದು ಬಂದಿದೆ. 

Advertisement

280ಕ್ಕೂ ಹೆಚ್ಚು ಪ್ರಾಣಿ-ಪಕ್ಷಿ
ಸದ್ಯ ಮೃಗಾಲಯದಲ್ಲಿ 280ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿವೆ. ಹುಲಿ, ಚಿರತೆ ಜಿಂಕೆ, ಕೃಷ್ಣಮೃಗ, ನೀಲಗಾಯಿ, ಕಡವೆ, ಕರಡಿ, ನರಿ, ಮೊಸಳೆ, ಆಮೆ, ಹೆಬ್ಟಾವು ಹಾಗೂ ವಿವಿಧ ಜಾತಿಯ 90 ಪಕ್ಷಿಗಳು ಪ್ರಮುಖ ಆಕರ್ಷಣೀಯ. ಕಳೆದ ವರ್ಷ ಮೈಸೂರು ಝೂನಿಂದ ಎರಡು ಹುಲಿ ಬಂದಿವೆ. 

ಬಾಟಲ್‌ ಮುಕ್ತ ಮೃಗಾಲಯ!
ಇಲ್ಲಿಯ ಮೃಗಾಲಯ ಬಾಟಲ್‌ ತ್ಯಾಜ್ಯದಿಂದ ಮುಕ್ತವಾಗಿದೆ. ಸಾರ್ವಜನಿಕರು ತಮ್ಮೊಂದಿಗೆ ತರುವ ನೀರಿನ ಬಾಟಲ್‌ಗ‌ಳಿಗೆ ತಲಾ 10 ರೂ. ಪಡೆದು ಸ್ಟಿಕ್ಕರ್‌ ಅಂಟಿಸಲಾಗುತ್ತಿದ್ದು, ಮರಳುವಾಗ ಹಣ ಮರಳಿಸಲಾಗುತ್ತದೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮೃಗಾಲಯ ಸ್ವಚ್ಛ ಹಾಗೂ ಹಸಿರಿನಿಂದ ಕಂಗೊಳಿಸುತ್ತಿದೆ.

ಸೂಕ್ಷ್ಮಜೀವಿಯಾಗಳಾಗಿರುವ ಹುಲಿ ಮತ್ತು ಪಕ್ಷಿಗಳ ಚಲನಲನಗಳನ್ನು ಗಮನಿಸುವುದಕ್ಕೂ ಸಿಸಿ ಕ್ಯಾಮರಾಗಳು ನೆರವಾಗುತ್ತವೆ.
ಮಹಾಂತೇಶ್‌ ಪೆಟ್ಲೂರ್‌,
ಸಣ್ಣ ಮೃಗಾಲಯದ ಆರ್‌ಎಫ್‌ಓ

Advertisement

Udayavani is now on Telegram. Click here to join our channel and stay updated with the latest news.

Next