Advertisement

ಮೈಕ್ರೋಸಾಫ್ಟ್ನಿಂದ ಶಾಲೆಗಳಲ್ಲಿ ಹೈಟೆಕ್‌ ಶಿಕ್ಷಣ

12:42 PM Sep 26, 2018 | Team Udayavani |

ಬೆಂಗಳೂರು: ಕನಿಷ್ಠ ಸೌಕರ್ಯಗಳೂ ಇಲ್ಲದೆ ಸೊರಗುತ್ತಿರುವ ಕಾರ್ಪೋರೆಷನ್‌ ಶಾಲಾ-ಕಾಲೇಜುಗಳ ಚಿತ್ರಣ ಈಗ ಬದಲಾಗಲಿದೆ. ಈ ಸರ್ಕಾರಿ ಶಾಲೆಯ ಮಕ್ಕಳ ಆಟ-ಪಾಠ ಇನ್ಮುಂದೆ ಹೈಟೆಕ್‌ ಕಂಪ್ಯೂಟರ್‌ಗಳು, ರೋಬೋಟ್‌ಗಳೊಂದಿಗೆ ನಡೆಯಲಿದೆ. ಇದಕ್ಕಾಗಿ ಸ್ವತಃ ಮೈಕ್ರೋಸಾಫ್ಟ್ ಕಂಪನಿ ಪಠ್ಯಕ್ರಮ ರೂಪಿಸಲಿದೆ. ಈ ಮಕ್ಕಳ ಕಲಿಕಾ ಪ್ರಗತಿ ಬಗ್ಗೆ ರೋಬೋಟ್‌ಗಳೇ ಪೋಷಕರಿಗೆ ಮಾಹಿತಿ ನೀಡಲಿವೆ.

Advertisement

ಹೌದು, ಇನ್ಮುಂದೆ ಚಿಕ್ಕಬಳ್ಳಾಪುರದ ಬಿಜಿಎಸ್‌ ವರ್ಲ್ಡ್ ಸ್ಕೂಲ್‌, ಮುಂಬೈನ ಗುರುಕುಲ ಸ್ಕೂಲ್‌ ಸೇರಿದಂತೆ ಪ್ರತಿಷ್ಠಿತ ಶಾಲೆಗಳಲ್ಲಿರುವ ತಂತ್ರಜ್ಞಾನ ಆಧಾರಿತ ಶಿಕ್ಷಣ ಸೌಲಭ್ಯ ಕಾರ್ಪೋರೆಷನ್‌ನ ಎಲ್ಲ ಶಾಲಾ-ಕಾಲೇಜುಗಳಲ್ಲಿ ದೊರೆಯಲಿದೆ.

ಈ ಸಂಬಂಧ ಮೈಕ್ರೋಸಾಫ್ಟ್ ಮತ್ತು ಟೆಕ್‌ ಅವಂತ್‌ ಗಾರ್ಡೆ ಸಹಯೋಗದಲ್ಲಿ ಬಿಬಿಎಂಪಿ “ಪ್ರಾಜೆಕ್ಟ್ ರೋಶಿನಿ’ ಎಂಬ ಯೋಜನೆಗೆ ಬುಧವಾರ ಪುರಭವನದಲ್ಲಿ ಚಾಲನೆ ದೊರೆಯಲಿದೆ. ಇದರಡಿ ಯೂನೆಸ್ಕೋ ಘೋಷಿಸಿದ “ಕನೆಕ್ಟೆಡ್‌ ಲರ್ನಿಂಗ್‌ ಕಮ್ಯುನಿಟಿ-2020′ ಯೋಜನೆ ಉದ್ದೇಶ ಸಾಕಾರಗೊಳಿಸುವ ಗುರಿ ಹೊಂದಿದ್ದು, ಹೊಸ ಶಿಕ್ಷಣ ಪದ್ಧತಿಗೆ ಪೂರಕವಾದ ತಂತ್ರಜ್ಞಾನ, ಕಲಿಕಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

500-600 ಕೋಟಿ ವೆಚ್ಚ: ಮೈಕ್ರೋಸಾಫ್ಟ್ ಮತ್ತು ಅವಂತ್‌ ಗಾರ್ಡೆ ಕಂಪನಿಗಳು ಕಾರ್ಪೋರೆಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆಯಡಿ ಸುಮಾರು 500-600 ಕೋಟಿ ವೆಚ್ಚದಲ್ಲಿ ಈ ಎಲ್ಲ ಶಾಲಾ-ಕಾಲೇಜುಗಳನ್ನು ವಿಶ್ವದರ್ಜೆಗೇರಿಸಲು ಮುಂದೆ ಬಂದಿವೆ. ಜತೆಗೆ ಶಾಲಾ ಕಟ್ಟಡದಿಂದ ಹಿಡಿದು ಪ್ರತಿಯೊಂದರ ಅಭಿವೃದ್ಧಿ ಹೊಣೆ ಕಂಪನಿಗಳು ವಹಿಸಲಿವೆ. ಸಮಾರು ಐದು ವರ್ಷಗಳು ತಮ್ಮ ಸುಪರ್ದಿಯಲ್ಲಿ ಇರಲಿದ್ದು, ತದನಂತರ ಬಿಬಿಎಂಪಿಗೆ ಹಸ್ತಾಂತರಿಸಲಾಗುತ್ತದೆ. 

ಗುಣಮಟ್ಟದ ಶಿಕ್ಷಣ: ಕಲಿಕೆ ಜತೆಗೆ ಕ್ರೀಡೆ, ಕಲೆ, ಬಾಹ್ಯಾಕಾಶ ವಿಜ್ಞಾನ, ಪಾರಂಪರಿಕ ಮತ್ತು ಪರಿಸರ, ಸಂಸ್ಕೃತಿ, ರಂಗಭೂಮಿ ಮತ್ತಿತರ ವಿಷಯಗಳ ಬಗ್ಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಶಿಕ್ಷಕರಿಗೆ 21ನೇ ಶತಮಾನದ ಕೌಶಲ್ಯ ತರಬೇತಿ ನೀಡಲಾಗುವುದು. ಅನುಭವ ಆಧಾರಿತ ಕಲಿಕೆಯಲ್ಲಿ ಸಮುದಾಯವನ್ನು ಭಾಗಿ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅವಂತ್‌ ಗಾರ್ಡೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲಿ ಸೇಠ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Advertisement

ಈ ಸಂಬಂಧ ಈಗಾಗಲೇ ಶಾಲೆಗಳ ಸಮೀಕ್ಷೆ, ಶಿಕ್ಷಕರ ಕೌಶಲ್ಯದ ಮಟ್ಟ ಪರೀಕ್ಷೆ, ಪೋಷಕರ ಮಾಹಿತಿ ಸೇರಿದಂತೆ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಲಹಾ ಸಮಿತಿ, ವ್ಯವಸ್ಥಾಪನಾ ಮಂಡಳಿ, ಆಡಳಿತ ಮಂಡಳಿ ರಚನೆ ಪ್ರಕ್ರಿಯೆ ನಡೆದಿದೆ ಎಂದರು.

ವಿಶ್ವದರ್ಜೆಗೆ: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿದರೆ, ಕಾರ್ಪೋರೆಷನ್‌ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ, ಕಟ್ಟಡಗಳ ಪರಿಸ್ಥಿತಿ ಮತ್ತಿತರ ಅಂಶಗಳು ಇದಕ್ಕೆ ಕಾರಣವಾಗಿವೆ. ಆದರೆ, ಮುಂದೆ ಈ ಸಮಸ್ಯೆ ಇರುವುದಿಲ್ಲ ಎಂದ ಅವರು, ಶಾಲಾ ಕಟ್ಟಡಗಳು, ಫ‌ರ್ನಿಚರ್‌ಗಳು, ಕಲಿಕಾ ಪದ್ಧತಿ ಸೇರಿದಂತೆ ಎಲ್ಲವೂ ವಿಶ್ವದರ್ಜೆಗೆ ಏರಲಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ ತಿಳಿಸಿದರು.

ಉಪ ಮೇಯರ್‌ ಪದ್ಮಾವತಿ ನರಸಿಂಹಮೂರ್ತಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ, ಬಿಬಿಎಂಪಿ ಆಡಳಿತ ಪಕ್ಷದ ನಾಯಕರಾದ ಶಿವರಾಜು, ಆರ್‌. ಸತ್ಯನಾರಾಯಣ, ಮಹಮ್ಮದ್‌ ರಿಜ್ಞಾನ್‌, ಗುಣಶೇಖರ್‌ ಮತ್ತಿತರರು ಇದ್ದರು.

“ಕಾರ್ಪೋರೆಷನ್‌ ಶಾಲಾ-ಕಾಲೇಜುಗಳ ಬಗ್ಗೆ ಒಂದು ರೀತಿಯ ತಾತ್ಸಾರ ಮನೋಭಾವ ಇದೆ. ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಾರೆ. ವಿನೂತನ ಯೋಜನೆಯಿಂದ ಈ ಚಿತ್ರಣ ಬದಲಾಗಲಿದೆ.
-ಡಾ.ಜಿ. ಪರಮೇಶ್ವರ, ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವ 

ಪ್ರಾಜೆಕ್ಟ್ ರೋಶಿನಿ ಯೋಜನೆಗೆ ಬಿಬಿಎಂಪಿ ಒಂದೇ ಒಂದು ಪೈಸೆ ಖರ್ಚು ಮಾಡುತ್ತಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದ ಸಕಾಲದಲ್ಲಿ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು ದೊರೆಯಲಿವೆ ಎಂದು ಹೇಳಿದರು. 
-ಎನ್‌. ಮಂಜುನಾಥ ಪ್ರಸಾದ್‌, ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next