ಗೋಕರ್ಣದಲ್ಲಿ ಆತ್ಮಲಿಂಗ ಪ್ರತಿಷ್ಠಾಪನೆಯಾದ ಮೇಲೆ, ರಾವಣನಿಂದಲೇ ಇನ್ನೂ ನಾಲ್ಕು ಲಿಂಗಗಳು ಪ್ರತಿಷ್ಠಾಪನೆಗೊಂಡವು. ಅವುಗಳಲ್ಲಿ ಒಂದು ಮುರ್ಡೇಶ್ವರ. ಸಾಗರದ ತಟದಲ್ಲಿರುವ, ಮುಗಿಲೆತ್ತರದ ಗೋಪುರ- ಶಿವನ ಮೂರ್ತಿಯ ವೈಭವದೊಂದಿಗೆ ಭಕ್ತಾದಿಗಳನ್ನು ಸೆಳೆಯುವ ಮುರ್ಡೇಶ್ವರದಲ್ಲಿ ಅನ್ನಸಂತರ್ಪಣೆಯೂ ಅಷ್ಟೇ ವಿಶೇಷ. ಇದೊಂದು ಹೈಟೆಕ್ ಭೋಜನ ಶಾಲೆ ಅಂತಲೇ ಹೇಳಬಹುದು.
ನಿತ್ಯದ ವಿಶೇಷ: ನಿತ್ಯ ಸರಾಸರಿ 2-3 ಸಾವಿರ ಮಂದಿ, ಮೂರು ಪಂಕ್ತಿಗಳಲ್ಲಿ ಭೋಜನ ಸ್ವೀಕರಿಸುತ್ತಾರೆ. ಮಧ್ಯಾಹ್ನ 2 ಗಂಟೆಯ ಒಳಗೆ ಇಲ್ಲಿ ಭೋಜನ ಪ್ರಸಾದ ಸ್ವೀಕಾರ ಮುಗಿದಿರುತ್ತದೆ. ವಿಶೇಷ ದಿನಗಳಲ್ಲಿ 7-8 ಸಾವಿರ ಜನ ಆಗಮಿಸುತ್ತಾರೆ.
ಪಂಚತಾರಾ ಮಾದರಿ: ಹಾಗೆ ನೋಡಿದರೆ, ಬೇರೆ ಯಾವ ದೇಗುಲಗಳಲ್ಲೂ ಕಾಣದ, ಪಂಚತಾರಾ ಮಾದರಿಯ ಅಡುಗೆಮನೆ ವಾತಾವರಣ, ಮುರ್ಡೇಶ್ವರದ ಹೆಗ್ಗಳಿಕೆ. ಈ ಅಪರೂಪದ ಪಂಚತಾರಾ ವ್ಯವಸ್ಥೆಯ ಹಿಂದಿರುವ ರೂವಾರಿ, ಉದ್ಯಮಿ ಆರ್.ಎನ್. ಶೆಟ್ಟಿಯವರು. 6 ಬಾಣಸಿಗರು, 12 ಮಂದಿ ಬಡಿಸುವವರು, ತಲೆಗೆ ಟೊಪ್ಪಿಗೆ ಧರಿಸಿ, ಅಡುಗೆ ಮಾಡುತ್ತಾರೆ, ಬಡಿಸುತ್ತಾರೆ. ಇಲ್ಲಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
ಭಕ್ಷ್ಯ ಸಮಾಚಾರ: ಪಾಯಸ, ಪಲ್ಯ, ರಸಂ, ಸಾಂಬಾರು, ಮಜ್ಜಿಗೆ ಮತ್ತು ಅನ್ನ ನಿತ್ಯದ ಪದಾರ್ಥಗಳು.
“ಎಸಿ’ ಭೋಜನ!: ಮುರ್ಡೇಶ್ವರ ಸಮುದ್ರ ತೀರದಲ್ಲಿರುವುದರಿಂದ ಮಳೆಗಾಲದಲ್ಲಿಯೂ ಇಲ್ಲಿ ವಿಪರೀತ ಸೆಖೆ. ಅಡುಗೆಯ ಕೋಣೆಗೆ ಉಷ್ಣತೆ ಹೊರಹಾಕುವ ಉಪಕರಣಗಳಿವೆ. ಬಡಿಸುವವರ ಬೆವರು ಬೀಳದಂತೆ, ಪ್ರಸಾದ ಸ್ವೀಕರಿಸುವವರು ಬೆವರದಂತೆ ಸಾವಿರ ಜನ ಊಟ ಮಾಡುವ ಭೋಜನಶಾಲೆಯನ್ನು ಸಂಪೂರ್ಣ ಹವಾನಿಯಂತ್ರಿತಗೊಳಿಸಲಾಗಿದೆ. ಸ್ವತ್ಛತೆ ಮತ್ತು ಆಹಾರ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಆರ್.ಎನ್. ಶೆಟ್ಟಿಯವರು ಮುರ್ಡೇಶ್ವರಕ್ಕೆ ಬಂದಾಗ ಸ್ವತಃ ತಪಾಸಣೆ ಮಾಡಿ, ಅಲ್ಲಿಯೇ ಊಟ ಮಾಡುತ್ತಾರೆ.
ಶಿಸ್ತುಬದ್ಧ ನಿರ್ವಹಣೆ: ದೇವಸ್ಥಾನದ ಮ್ಯಾನೇಜರ್ ಪ್ರಸಾದ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಕಲ್ಯಾಣ ಮಂಟಪ ಮತ್ತು ಪ್ರಸಾದ ಭೋಜನಾಲಯ, ಅಡುಗೆ ಕೋಣೆಗಳು ಪ್ರತ್ಯೇಕವಾಗಿದ್ದು, ಯಾತ್ರಿಕರಿಗೆ ಯಾವುದೇ ಗೊಂದಲ ಉಂಟಾಗದಂತೆ ಸಾಕಷ್ಟು ಸಿಬ್ಬಂದಿಯನ್ನು ನೇಮಿಸಲಾಗಿದೆ.
ವಿಶೇಷತೆಗಳೇನು?
– ಶುದ್ಧೀಕರಿಸಿದ ಶರಾವತಿಯ ನೀರನ್ನು ಬಿಸ್ಲರಿ ಗುಣಮಟ್ಟದಲ್ಲಿ ಸಂಸ್ಕರಿಸಿ ಅಡುಗೆಗೆ ಬಳಸುತ್ತಾರೆ. ಕುಡಿಯಲೂ ಬಿಸಿನೀರು ಲಭ್ಯ.
– ಪಾತ್ರೆ ತೊಳೆಯಲೂ ಇಲ್ಲಿ ಬಿಸಿನೀರಿನ ಬಳಕೆ.
– ಎಲ್ಲಾ ಅಡುಗೆಯನ್ನು ಉಗಿಯಲ್ಲಿ ಸಿದ್ಧಪಡಿಸಿ, ಬಿಸಿಬಿಸಿಯಾಗಿ ಬಡಿಸುತ್ತಾರೆ.
– ಮಾರ್ಬಲ್ ಹಾಸಿದ ನೆಲದಲ್ಲಿ ಊಟಕ್ಕೆ ಕೂರಲು ಮಣೆಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಖ್ಯಾ ಸೋಜಿಗ
6- ಬಾಣಸಿಗರಿಂದ ನಿತ್ಯ ಅಡುಗೆ ತಯಾರಿ
12- ಮಂದಿ ಬಡಿಸುವವರು
3000- ಮಂದಿಗೆ ನಿತ್ಯ ಅನ್ನಸಂತರ್ಪಣೆ
8000- ಭಕ್ತರಿಗೆ ವಿಶೇಷ ದಿನಗಳಲ್ಲಿ ಊಟ
* ಜೀಯು ಭಟ್ಟ