ಪಣಜಿ: ಮಹಾರಾಷ್ಟ್ರ, ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೊರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವ ನಾಗರೀಕರಿಗೆ ಗೋವಾ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಗೋವಾ ಗಡಿಯಲ್ಲಿ ಅಧಿಕ ಕಟ್ಟೆಚ್ಚರ ವಹಿಸಲಾಗಿದೆ.
ಕೇರಳದಿಂದ ಗೋವಾಕ್ಕೆ ರೈಲ್ವೆಯ ಮೂಲಕ ಜನರು ಆಗಮಿಸುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿಯೂ ಖಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ಗೋವಾಕ್ಕೆ ಹೊರ ರಾಜ್ಯಗಳಿಂದ ಆಗಮಿಸುವವರಿಗೆ 72 ಗಂಟೆಗಳ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಖಡ್ಡಾಯಗೊಳಿಸಲಾಗಿದೆ.
ಕರ್ನಾಟಕದಿಂದ ಗೋವಾಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಆಗಮಿಸುತ್ತಿದ್ದರೂ ಕೂಡ ಗೋವಾಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರು ಕೋವಿಡ್ ಎಂಟಿಜನ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವುದು ಖಡ್ಡಾಯವಿದೆ. ಗೋವಾದ ಎಲ್ಲ ಗಡಿಗಳಲ್ಲಿಯೂ ಕೋವಿಡ್ ತಪಾಸಣಾ ಕೇಂದ್ರವನ್ನು ಸರ್ಕಾರ ಸ್ಥಾಪಿಸಿದೆ.
ಇದನ್ನೂ ಓದಿ : ಅಶೋಕ ಲೇಲ್ಯಾಂಡ್ ನ ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಹೆಚ್ಚಳ..!
ಗೋವಾಕ್ಕೆ ಆಗಮಿಸುವರು ಯಾರು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿಲ್ಲವೋ ಅವರು ಗೋವಾ ಗಡಿಯಲ್ಲಿ 270 ರೂ ಶುಲ್ಕ ಭರಿಸಿ ಕೋವಿಡ್ ತಪಾಸಣೆ ಮಾಡಿಕೊಂಡು ನೆಗೆಟಿವ್ ವರದಿ ಬಂದ ನಂತರ ಮಾತ್ರ ಗೋವಾ ಪ್ರವೇಶಿಸಬಹುದಾಗಿದೆ, ಒಂದು ವೇಳೆ ಕೋವಿಡ್ ಸೋಂಕು ದೃಢಪಟ್ಟರೆ ಅಂತವರು ತಮ್ಮ ರಾಜ್ಯಕ್ಕೆ ವಾಪಸು ತೆರಳಬೇಕು.
ನೆರೆಯ ರಾಜ್ಯಗಳಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಗೋವಾ ಗಡಿಯಲ್ಲಿ ಕಟ್ಟೆಚರ ವಹಿಸಲು ಗೋವಾ ಸರ್ಕಾರ ಸೂಚನೆ ನೀಡಿದೆ.