ಬೆಂಗಳೂರು: ಸರ್ಕಾರಿ ದಂತ ವೈದ್ಯ ಕಾಲೇಜಿನಲ್ಲಿ ದಂತ ವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ತಕರಾರು ಅರ್ಜಿಗೆ ಕುರಿತು ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ಸೂಚಿಸಿದೆ.
ವಿಶೇಷ ಚೇತನರ ಕೋಟಾದಡಿಯಲ್ಲಿ ದಂತವೈದ್ಯಾಧಿಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಬೆಂಗಳೂರಿನ ಡಾ.ರಾಜಲಕ್ಷ್ಮಿ ಅವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಬಿ. ಚೌಹಾಣ್ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿತು.
ಈ ತಕರಾರು ಅರ್ಜಿ 2016ರಿಂದಲೂ ಬಾಕಿ ಉಳಿದುಕೊಂಡಿದೆ. ದಂತವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕಾಲೇಜು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದು ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ.
ಆದರೆ ಸರ್ಕಾರದ ಪರ ವಕೀಲರು ವೈದ್ಯಕೀಯ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದೆ, ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ ಎಂದಿದ್ದಾರೆ. ಜೊತೆಗೆ ಈ ಎರಡೂ ವಿಚಾರಗಳ ಬಗ್ಗೆ ಅರ್ಜಿದಾರರು ಕೆಲ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಹೀಗಾಗಿ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನ್ಯಾಯಪೀಠ ನಿರ್ದೇಶಿಸಿದೆ.
ಅರ್ಜಿದಾರರ ಪರ ವಾದಿಸುತ್ತಿರುವ ಅವರ ತಾಯಿ ಶೋಭಾ ಅವರು, ಕೋರ್ಟ್ ಕಲಾಪಗಳಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆ ತೀವ್ರ ಅಸಮಾಧಾನವ್ಯಕ್ತಪಡಿಸಿರುವ ನ್ಯಾಯಪೀಠ, ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತರುವ ರೀತಿಯ ವರ್ತನೆಯನ್ನು ಸಹಿಸಲಾಗುವುದಿಲ್ಲ. ಮುಂದೆ ಈ ವರ್ತನೆ ಪುನಾರವರ್ತನೆಯಾದರೇ ನ್ಯಾಯಾಂಗ ನಿಂದನೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಮಗಳ ಪರವಾಗಿ ವಾದ ಮಂಡಿಸುತ್ತಿರುವ ಶೋಭಾ, ಕಲಾಪದಲ್ಲಿ ನ್ಯಾಯಾಂಗ ವ್ಯವಸ್ಥೆಯ ಘನತೆಗೆ ತಕ್ಕದಾಗಿ ನಡೆದುಕೊಳ್ಳುತ್ತಿಲ್ಲ. ಕಾನೂನು ಅಂಶಗಳ ಆಧಾರದಲ್ಲಿ ವಾದ ಮಂಡಿಸುತ್ತಿಲ್ಲ. ಹೀಗಾಗಿ ಅಗತ್ಯವಿದ್ದರೆ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದುಕೊಳ್ಳಬೇಕು. ಜೊತೆಗೆ ಪ್ರಾಧಿಕಾರ ಅಮಿಕಸ್ ಕ್ಯೂರಿಯನ್ನು ನೇಮಕಮಾಡಲು ಕ್ರಮ ವಹಿಸಿ ಎಂದು ಕೋರ್ಟ್ ಮದ್ಯಂತರ ಆದೇಶ ನೀಡಿದೆ.