Advertisement

ತ್ಯಾಜ್ಯ ವಿಲೇವಾರಿ ಘಟಕ ಸ್ಥಗಿತಕ್ಕೆ ಹೈ ಸೂಚನೆ

12:43 AM Feb 20, 2020 | Team Udayavani |

ಬೆಂಗಳೂರು: ನಗರದ ಮಹಾಲಕ್ಷ್ಮೀಪುರದ 2ನೇ ಹಂತದ ವಸತಿ ಪ್ರದೇಶದಲ್ಲಿ ಆರಂಭಿಸಿರುವ ತಾಜ್ಯ ವಿಂಗಡಣೆ ಮತ್ತು ವಿಲೇವಾರಿ ಘಟಕವನ್ನು ಒಂದು ತಿಂಗಳಲ್ಲಿ ಸ್ಥಗಿತಗೊಳಿಸಬೇಕು ಬಿಬಿಎಂಪಿಗೆ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

Advertisement

ತ್ಯಾಜ್ಯ ಘಟಕವನ್ನು ಸ್ಥಳಾಂತರಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಮಹಾಲಕ್ಷ್ಮೀಪುರ 2ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಈ ವೇಳೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು, ಈ ಘಟಕ ಆರಂಭಿಸಲು ಬಿಬಿಎಂಪಿಯು ಮಂಡಳಿಯಿಂದ ಪೂರ್ವಾನುಮತಿ ಪಡೆದಿಲ್ಲ. ಘಟಕವು ವಸತಿ ಪ್ರದೇಶದ 100 ಮೀ. ವ್ಯಾಪ್ತಿಯೊಳಗೆ ಇದೆ ಎಂದು ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಘಟಕ ಆರಂಭಿಸಲು ಮಂಡಳಿಯಿಂದ ಪೂರ್ವಾನುಮತಿ ಪಡೆದಿಲ್ಲ.

ಇದು ಕಾನೂನು ಬಾಹಿರ ಕ್ರಮವಾಗಿದೆ. ಆದ್ದರಿಂದ ಒಂದು ತಿಂಗಳಲ್ಲಿ ಘಟಕದ ಎಲ್ಲಾ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಬೇಕು. ನಂತರ ಘಟಕವನ್ನು ಮುಂದುರಿಸಬೇಕೆಂದು ಉದ್ದೇಶಿಸಿದರೆ, ಅದಕ್ಕಾಗಿ ಅನುಮತಿ ಕೋರಿ ಮಂಡಳಿಗೆ ಕಾನೂನು ಪ್ರಕಾರ ಸೂಕ್ತ ಅರ್ಜಿ ಸಲ್ಲಿಸಬೇಕು.

ಒಂದೊಮ್ಮೆ ಘಟಕದ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸದಿದ್ದರೆ, ಅದರ ಜಾಗವನ್ನು ಆಟದ ಮೈದಾನವಾಗಿ ಪರಿವರ್ತಿಸಬೇಕೆಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಬೇಕು ಎಂದು ಬಿಬಿಎಂಪಿಗೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು. ಮಹಾಲಕ್ಷ್ಮೀಪುರಂನ 2ನೇ ಹಂತದಲ್ಲಿ ಸರ್ವೇ ನಂಬರ್‌ 31/4ರಲ್ಲಿನ 1021 ಚ.ಮೀ. ವಿಸ್ತೀರ್ಣದ ನಿವೇಶನದಲ್ಲಿ ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಮತ್ತು ವಿಲೇವಾರಿ ಘಟಕವನ್ನು ಬಿಬಿಎಂಪಿ ಆರಂಭಿಸಿದೆ.

Advertisement

ಆದರೆ, ಘಟಕದ ಸುತ್ತಮುತ್ತ ಜನ ವಸತಿ ಪ್ರದೇಶವಿದೆ. ಅಲ್ಲದೆ, ಶಾಲೆ, ಆಸ್ಪತ್ರೆ, ವಾಣಿಜ್ಯ ಮಳಿಗೆ ಹಾಗೂ ಚಿತ್ರಮಂದಿರಗಳಿವೆ. ಘಟಕದಿಂದ ಸುತ್ತಮುತ್ತಲಿನ ಪರಿಸರ ಮಾಲಿನ್ಯವಾಗುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹೀಗಾಗಿ ಘಟಕವನ್ನು ಸ್ಥಳಾಂತರಿಸಬೇಕು. ಸ್ಥಳಾಂತರದ ಬಳಿಕ ಆ ಜಾಗವನ್ನು ಆಟದ ಮೈದಾನವಾಗಿ ಮಾರ್ಪಡಿಸಿಕೊಡಲು ಬಿಬಿಎಂಪಿಗೆ ನೀರ್ದೇ ಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಪಾಲಿಕೆಗೆ ನ್ಯಾಯಪೀಠದ ಸೂಚನೆಗಳು
-ಘಟಕ ಆರಂಭಿಸಲು ಮಂಡಳಿಯಿಂದ ಪೂರ್ವಾನುಮತಿ ಪಡೆಯದಿರುವುದು ಕಾನೂನು ಬಾಹಿರ ಕ್ರಮ.

-ಒಂದು ತಿಂಗಳಲ್ಲಿ ಘಟಕದ ಎಲ್ಲಾ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಬೇಕು.

-ಬಳಿಕ ಘಟಕ ಮುಂದುರಿಸಲು ಅನುಮತಿ ಕೋರಿ ಮಂಡಳಿಗೆ ಕಾನೂನು ಪ್ರಕಾರ ಅರ್ಜಿ ಸಲ್ಲಿಸಬೇಕು.

-ಒಂದೊಮ್ಮೆ ಘಟಕದ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸದಿದ್ದರೆ, ಅದರ ಜಾಗವನ್ನು ಆಟದ ಮೈದಾನವಾಗಿ ಪರಿವರ್ತಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next