Advertisement

‘ಗರುಡ ಗಮನ ವೃಷಭ ವಾಹನ’ನ.19ಕ್ಕೆ ಬಿಡುಗಡೆ; ಹೆಚ್ಚಾಗುತ್ತಿದೆ ನಿರೀಕ್ಷೆ

01:03 PM Nov 12, 2021 | Team Udayavani |

‘ಗರುಡ ಗಮನ ವೃಷಭ ವಾಹನ’- ಹೊಸ ಬಗೆಯ ಸಿನಿಮಾವಾಗಿ ನಿರೀಕ್ಷೆ ಹುಟ್ಟಿಸಿರುವ ಪಟ್ಟಿಯಲ್ಲಿ ಈ ಚಿತ್ರ ಮೊದಲಿಗೆ ಸಿಗುತ್ತದೆ. ಅದಕ್ಕೆ ಕಾರಣ ನಿರ್ದೇಶಕ ರಾಜ್‌ ಬಿ ಶೆಟ್ಟಿಯವರ ಈ ಹಿಂದಿನ ಸಿನಿಮಾ. “ಒಂದು ಮೊಟ್ಟೆಯ ಕಥೆ’ ಎಂಬ ವಿಭಿನ್ನ ಹಾಗೂ ನೈಜ ಸಿನಿಮಾ ಮೂಲಕ ಚೊಚ್ಚಲ ನಿರ್ದೇಶನದಲ್ಲೇ ಗಮನ ಸೆಳೆದ ರಾಜ್‌ ಶೆಟ್ಟಿಯವರು ಎರಡನೇ ಸಿನಿಮಾ ಮೇಲೂ ಕುತೂಹಲ ಹೆಚ್ಚಿದೆ. ಚಿತ್ರ ನ.19ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಪ್ರೇಮಿಗಳು ಕೂಡಾ ನ.19ರ ಮೇಲೆ ನಿರೀಕ್ಷೆ ಇಟ್ಟು ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಹಿಟ್‌ಲಿಸ್ಟ್‌ ಸೇರಿದೆ.

Advertisement

“ಗರುಡ ಗಮನ ವೃಷಭ ವಾಹನ’ ಸಿನಿಮಾದ ಟ್ರೇಲರ್‌ ನೋಡಿದವರಿಗೆ ಇದು ರೆಗ್ಯುಲರ್‌ ಜಾನರ್‌ ಸಿನಿಮಾವಲ್ಲ ಎಂಬುದು ಗೊತ್ತಾಗುತ್ತದೆ. ಇದೇ ಮಾತನ್ನು ನಿರ್ದೇಶಕ ರಾಜ್‌ ಬಿ ಶೆಟ್ಟಿ ಕೂಡಾ ಹೇಳುತ್ತಾರೆ.

“ಸಾಮಾನ್ಯವಾಗಿ ಒಂದು ಸಿನಿಮಾ ಎಂದರೆ ಅನೇಕರಲ್ಲಿ ಒಂದು ಭಾವನೆ ಇದೆ. ಅದೇನೆಂದರೆ ಕೆಲವು ದೃಶ್ಯಗಳು ನಾವು ಅಂದುಕೊಂಡಂತೆಯೇ ಆಗುತ್ತದೆ ಎಂಬುದು. ಆ ತರಹದ ಒಂದು ನಿರ್ಧಾರಕ್ಕೆ ಬಂದು ಬಿಡುತ್ತೇವೆ. ನಾವು ಅದರಾಚೆ ಯೋಚನೆ ಮಾಡಿದ್ದೇವೆ. ಅದೇ ಕಾರಣದಿಂದ ನಿಮಗೆ ಟ್ರೇಲರ್‌ನಲ್ಲಿ ವಿಭಿನ್ನವಾದ ಹಿನ್ನೆಲೆ ಸಂಗೀತವಿದೆ. ಒಂದಷ್ಟು ವರ್ಷಗಳ ನಂತರ ಸಿನಿಮಾ ಮರೆತು ಹೋಗಬಹುದು, ಅದರ ಕಥೆ, ಸಂಗೀತವೂ ನೆನಪಿಗೆ ಬಾರದೇ ಇರಬಹುದು. ಆದರೆ, ಆ ಸಿನಿಮಾ ಕೊಟ್ಟ ಅನುಭವ ಮಾತ್ರ ಸದಾ ನೆನಪಿನಲ್ಲಿರುತ್ತದೆ. ನಮ್ಮ ಸಿನಿಮಾವೂ ಈ ತರಹದ ಒಂದು ಫೀಲ್‌ ಕೊಡಬೇಕು ಎಂಬ ಆಶಯದೊಂದಿಗೆ ಕಟ್ಟಿಕೊಟ್ಟಿದ್ದೇವೆ. ಇಷ್ಟೇ ಸಾಕು ಎಂದು ಮಾಡಿಲ್ಲ, ನಮ್ಮ ಕೈಯಲ್ಲಿ ಏನೆಲ್ಲಾ ಹೊಸದು ಮಾಡಬಹುದೋ ಅದನ್ನು ಮಾಡಿದ್ದೇವೆ. ನನ್ನ ಪ್ರಕಾರ, ಸಿನಿಮಾದ ಅದರ ಆಶಯದಲ್ಲಿ ಗ್ಲೋಬಲ್‌ ಆಗಿರಬೇಕು, ಥೀಮ್‌ನಲ್ಲಿ ಲೋಕಲ್‌ ಆಗಿರಬೇಕು. ನಾವು ಮಾಡೋದು ಒಂದು ಗ್ಯಾಂಗ್‌ಸ್ಟಾರ್‌ ಸಿನಿಮಾ. ಅದನ್ನು ಮತ್ತೆ ಮತ್ತೆ ಮಾಡುವ ಉದ್ದೇಶವಿಲ್ಲ. ಒಮ್ಮೆ ಮಾಡುವ ಎಷ್ಟು ಚೆನ್ನಾಗಿ ಮಾಡಬಹುದೋ, ಅಷ್ಟು ಚೆನ್ನಾಗಿ ಕಟ್ಟಿಕೊಡಲು ಪ್ರಯತ್ನ ಪಡಬೇಕು. ಅದನ್ನಿಲ್ಲಿ ಪಟ್ಟಿದ್ದೇವೆ. ಇದು ಫ್ರೆಂಡ್‌ಶಿಪ್‌ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಅದಕ್ಕೆ ಗ್ಯಾಂಗ್‌ಸ್ಟರ್‌ ಸೆಟಪ್‌ ಇದೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ರಾಜ್‌ ಶೆಟ್ಟಿ.

ಇದನ್ನೂ ಓದಿ:ತಮಗಿಂತ ಚಿಕ್ಕ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ಹೇಳಿಕೊಂಡ ರಶ್ಮಿಕಾ

ಕುತೂಹಲ ಹೆಚ್ಚಿಸಿರುವ ಟೈಟಲ್‌:  ವಿಭಿನ್ನ ಟೈಟಲ್‌ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಗ್ಯಾಂಗ್‌ಸ್ಟಾರ್‌ ಕಥೆ. ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡುವ ರಾಜ್‌ ಶೆಟ್ಟಿ, “ಇದು ಮಂಗಳೂರು ಹಿನ್ನೆಲೆಯಲ್ಲಿ ನಡೆಯುವ ಗ್ಯಾಂಗ್‌ ಸ್ಟಾರ್‌ ಕಥೆ. ಆರಂಭದಲ್ಲಿ ನಾವು “ಹರಿಹರ’ ಎಂಬ ಟೈಟಲ್‌ ಅಂದು ಕೊಂಡಿದ್ದೆವು. ಅದಕ್ಕೆ ಕಾರಣ ವಿಷ್ಣು ಹಾಗೂ ಶಿವ ಅವರ ಗುಣ. ಅವರ ಗುಣವನ್ನು ಇಬ್ಬರು ಹೀರೋಗಳಿಗೆ ಅನ್ವಯಿಸಿದರೆ ಹೇಗಿರುತ್ತದೆ ಎಂದುಕೊಂಡು ಆ ಟೈಟಲ್‌ ಇಟ್ಟೆವು. ಆದರೆ, ಸಿನಿಮಾ ಮಾಡುತ್ತಾ, ಟೈಟಲ್‌ ಸಿಂಪಲ್‌ ಅನಿಸಿತು. ಹಾಗಾಗಿ “ಗರುಡ ಗಮನ ವೃಷಭ ವಾಹನ’ ಇಟ್ಟೆವು. ಇದು ಎರಡು ಪಾತ್ರಗಳನ್ನು ಸೂಚಿಸುತ್ತದೆ’ ಎನ್ನುವುದು ರಾಜ್‌ ಶೆಟ್ಟಿ ಮಾತು.

Advertisement

ಈ ಬಾರಿ ಚಿತ್ರದ ನಿರ್ಮಾಣವನ್ನು ಸ್ನೇಹಿತರ ಜೊತೆ ಸೇರಿ ರಾಜ್‌ ಶೆಟ್ಟಿಯವರೇ ಮಾಡಿದ್ದಾರೆ. ಚಿತ್ರ ಬಿಡುಗಡೆಗೆ ರಕ್ಷಿತ್‌ ಶೆಟ್ಟಿಯ ಪರಂವಾ ಸ್ಟುಡಿಯೋ ಸಾಥ್‌ ನೀಡಿದೆ. ಉಳಿದಂತೆ “ಒಂದು ಮೊಟ್ಟೆಯ ಕಥೆ’ ತಂಡವೇ ತಾಂತ್ರಿಕ ವರ್ಗದಲ್ಲಿ ಮುಂದುವರೆದಿದೆ. 35 ದಿನಗಳ ಕಾಲ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next