Advertisement

High Court: “ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ’; ತೀರ್ಪು ಹಿಂದಕ್ಕೆ

11:59 PM Jul 20, 2024 | Team Udayavani |

ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರ ನೋಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಲ್ಲ ಎಂದು ಜುಲೈ 10ರಂದು ತಾನು ನೀಡಿದ್ದ ಆದೇಶವನ್ನು ರಾಜ್ಯ ಹೈಕೋರ್ಟ್‌ ಹಿಂಪಡೆದಿದೆ.

Advertisement

ಹೊಸಕೋಟೆಯ ಎಂ. ಇನಾಯುತ್ತುಲ್ಲ ಎಂಬಾತನ ಮೇಲೆ 2023ರ ಮಾರ್ಚ್‌ನಲ್ಲಿ ಮಕ್ಕಳ ಪೋರ್ನೋಗ್ರಫಿ ನೋಡಿದ ಆರೋಪದ ಮೇಲೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿತ್ತು. ಈ ಎಫ್ಐಆರ್‌ ರದ್ದು ಪಡಿಸುವಂತೆ ಆತ ಹೈಕೋರ್ಟ್‌ಗೆ ಮೊರೆ ಹೋಗಿದ್ದ. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ| ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಐಟಿ ಕಾಯ್ದೆ 67ಬಿಯಡಿ ಮಕ್ಕಳ ಅಶ್ಲೀಲ ಚಿತ್ರ ನೋಡಿದ್ದು ಅಪರಾಧವಾಗುವುದಿಲ್ಲ ಎಂದು ಆರೋಪಿಯ ಮೇಲೆ ನಡೆಯುತ್ತಿದ್ದ ತನಿಖೆಯನ್ನು ರದ್ದುಪಡಿಸಿ ತೀರ್ಪು ನೀಡಿತ್ತು.

ಆದರೆ ಈ ತೀರ್ಪನ್ನು ಹಿಂಪಡೆಯಬೇಕು ಎಂದು ರಾಜ್ಯ ಸರಕಾರ ಅರ್ಜಿ ಸಲ್ಲಿಸಿತ್ತು. ಜುಲೈ 10ರ ತೀರ್ಪನ್ನು ಐಟಿ ಕಾಯ್ದೆಯ 67ಬಿ(ಎ)ಯನ್ನು ಪರಿಗಣಿಸಿ ನೀಡಲಾಗಿದೆ. 67ಬಿ(ಬಿ)ಯಡಿ ಮಕ್ಕಳ ಅಶ್ಲೀಲ ಚಿತ್ರವನ್ನು ಬ್ರೌಸ್‌ ಮಾಡುವುದು, ಡೌನ್‌ಲೋಡ್‌ ಮಾಡುವುದು, ಹಂಚುವುದು, ಉತ್ತೇಜಿಸುವುದು, ಪದ ಅಥವಾ ಡಿಜಿಟಲ್‌ ಚಿತ್ರ ಬಿಡಿಸುವುದು ಸೇರಿದಂತೆ ವಿದ್ಯುನ್ಮಾನ ರೀತಿಯಲ್ಲಿ ಬಳಸುವುದು ಅಪರಾಧ ಎಂಬ ಅಂಶವನ್ನು ಪರಿಗಣಿಸದೆ ತೀರ್ಪು ನೀಡಲಾಗಿದೆ ಎಂದು ವಾದಿಸಿತ್ತು.

ಗಮನಿಸದೇ ತೀರ್ಪು: ನ್ಯಾಯಾಲಯವು ಕಾಯ್ದೆಯ ಸೆಕ್ಷನ್‌ 67ಬಿ(ಬಿ)ಯನ್ನು ಗಮನಿಸದೆ ತೀರ್ಪು ನೀಡಿದ್ದು, ಲೋಪವಾಗಿದೆ. ಜಡ್ಜ್ಗಳಾದ ನಾವು ಸಹ ಮನುಷ್ಯರೇ. ನಾವು ಸಹ ದೋಷರಹಿತರಲ್ಲ. ಆದ್ದರಿಂದ ಆದೇಶದಲ್ಲಿನ ಲೋಪ ಗಮನಕ್ಕೆ ಬರುತ್ತಿರುವಂತೆ ನಾವು ಆದೇಶವನ್ನು ಹಿಂಪಡೆಯುತ್ತಿದ್ದೇವೆ ಎಂದು ನ್ಯಾ| ನಾಗಪ್ರಸನ್ನ ಹೇಳಿದ್ದಾರೆ. ಹಾಗೆಯೇ ಆರೋಪಿಯ ಮೇಲಿನ ತನಿಖೆಯನ್ನು ರದ್ದು ಪಡಿಸಿದ್ದ ಆದೇಶವನ್ನು ಹಿಂಪಡೆದು ತನಿಖೆಗೆ ಅವಕಾಶ ನೀಡಿ ಆದೇಶವನ್ನು ನ್ಯಾಯಾಲಯ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next