ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಆದೇಶ ಕೋರಿ ಹೈಕೋರ್ಟ್ ಮೊರೆ ಹೋಗಲಾಗುವುದೆಂದು ಗೌರಿ ಸಹೋದರ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಗೌರಿ ಜನ್ಮದಿನ ಅಂಗವಾಗಿ ಸೋಮವಾರ ಚಾಮರಾಜ ಪೇಟೆಯ ವೀರಶೈವ - ಲಿಂಗಾಯತ ರುದ್ರಭೂಮಿಯಲ್ಲಿ ಗೌರಿ ನೆನಪಿನ ಕಾರ್ಯಕ್ರಮ ಮತ್ತು ಗೌರಿ ಹಂತಕರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ಅಕ್ಕ ಗೌರಿ ಹತ್ಯೆಯಾಗಿ 5 ತಿಂಗಳಾದರೂ ಕೊಲೆಗಡುಕರ ಪತ್ತೆಯಾಗಿಲ್ಲ. ವಿಶೇಷ ತನಿಖಾ ತಂಡಕ್ಕೆ ರಾಜಕೀಯದ ಒತ್ತಡವಿದ್ದು ತನಿಖೆಯಲ್ಲಿ ನ್ಯಾಯ ಸಿಗುವುದು ಅನುಮಾನ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಹೈಕೋರ್ಟ್ ಮೆಟ್ಟಿಲು ಹತ್ತುತ್ತಿರುವುದಾಗಿ ಹೇಳಿದರು.
ನನ್ನ ತಾಯಿ ಹಾಗೂ ಸಹೋದರಿಯ ಮಾತಿಗೆ ಬೆಲೆ ಕೊಟ್ಟು ಇಷ್ಟು ದಿನ ಸುಮ್ಮನಿದ್ದೆ. ಪ್ರತಿ ಬಾರಿಯೂ ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ರಾಮಲಿಂಗಾರೆಡ್ಡಿ ಗೌರಿ ಹಂತಕರು ಪತ್ತೆಯಾಗಿದ್ದಾರೆ. ಸದ್ಯದಲ್ಲೇ ಬಹಿರಂಗ ಪಡಿಸುತ್ತೇವೆ ಎನ್ನುತ್ತಿದ್ದಾರೆ. ಗೌರಿ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ನೋವಾಗಿದೆ ಎಂದರು.
ಸಿದ್ದರಾಮಯ್ಯ ಹಾಗೂ ಅವರ ಸರ್ಕಾರಕ್ಕಾಗಿ ಕೂಲಿ ಕಾರ್ಮಿಕಳಂತೆ ಗೌರಿ ಕೆಲಸ ಮಾಡಿದಳು. ಆದರೆ, ಸರ್ಕಾರ ಆಕೆಯ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಗೌರಿ ಹತ್ಯೆಯಾದ ಬಳಿಕ ಆಕೆಯ ಹೆಸರಿನಲ್ಲಿ ಆಯೋಜನೆಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಗಮನಿಸುತ್ತಿದ್ದೇನೆ. ಇವುಗಳು ರಾಜಕೀಯ ಪ್ರೇರಿತ ಕಾರ್ಯಕ್ರಮಗಳಾಗಿವೆ. ಗೌರಿ ಹತ್ಯೆಯಾಗಿ ಕೆಲ ದಿನಗಳಲ್ಲೇ ಬೆಂಗಳೂರಿನಲ್ಲಿ ರ್ಯಾಲಿ ನಡೆಯಿತು. ಅಲ್ಲಿ ದೆಹಲಿಯ ಜೆಎನ್‌ಯು ವಿದ್ಯಾರ್ಥಿಗಳು ಸೇರಿ ದೇಶದ ಇತರೆ ರಾಜ್ಯಗಳ ಮುಖಂಡರು ಪಾಲ್ಗೊಂಡು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರನ್ನು ನಿಂದಿಸಿದರು. ಅಲ್ಲದೇ ಇಂತಹ ಕಾರ್ಯಕ್ರಮಗಳ ನೇತೃತ್ವವನ್ನು ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ವಹಿಸಿರುವ ಹಿಂದಿನ ಉದ್ದೇಶವೇನೆಂದು ಇಂದ್ರಜಿತ್ ಪ್ರಶ್ನಿಸಿದರು.
ಸೋಮವಾರ ಪುರಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಆಹ್ವಾನವಿದ್ದರೂ ಹೋಗುವುದಿಲ್ಲ. ಇದೊಂದು ರಾಜ್ಯ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ ಎಂದು ದೂರಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸೇರಿ ನೂರಾರು ಮಂದಿ ಗೌರಿ ಲಂಕೇಶ್ ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದರು.