Advertisement

ಸ್ಮಶಾನಗಳ ವಿವರ ನೀಡಲು ಸರ್ಕಾರಕ್ಕೆ ಹೈ ಸೂಚನೆ

06:31 AM Feb 13, 2019 | Team Udayavani |

ಬೆಂಗಳೂರು: ರಾಜ್ಯದ ಪ್ರತಿ ಕಂದಾಯ ಗ್ರಾಮ ಹಾಗೂ ಎಲ್ಲ ಪಟ್ಟಣಗಳಲ್ಲಿ ಲಭ್ಯವಿರುವ ಸ್ಮಶಾನ ಭೂಮಿಯ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಈ ಕುರಿತಂತೆ ಮಹಮ್ಮದ್‌ ಇಕ್ಬಾಲ್‌ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ನೇತೃತ್ವದ ವಿಭಾಗೀಯಪೀಠ ಈ ನಿರ್ದೇಶನ ನೀಡಿದೆ. ರಾಜ್ಯದಲ್ಲೆಡೆ ಸ್ಮಶಾನ ಭೂಮಿಯನ್ನು ಕಾಯ್ದಿರಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿ ವಿಚಾರಣೆ ವೇಳೆ ಕಂದಾಯ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ 11,77,925 ಎಕರೆಯಷ್ಟು ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಈ ಜಮೀನು ವಶಕ್ಕೆ ಪಡೆದರೆ ಸ್ಮಶಾನಕ್ಕೆ ಜಾಗ ಲಭ್ಯವಾ ಗುತ್ತದೆ ಎಂಬ ವಿಚಾರವನ್ನು ಅರ್ಜಿದಾರರು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರಿ ಜಮೀನು ಒತ್ತುವರಿ ಕುರಿತಂತೆ ಮಾ.6ರ ಒಳಗೆ ಸಮಗ್ರ ವರದಿ ಸಲ್ಲಿಸಿ. ಒತ್ತುವರಿ ಮಾಡಿಕೊಂಡಿರುವವರ ಹೆಸರಿನ ಪಟ್ಟಿಯನ್ನೂ ನೀಡಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಮನವಿ ಏನು?: ಪ್ರತಿಯೊಬ್ಬ ವ್ಯಕ್ತಿಯ ಅಂತ್ಯಕ್ರಿಯೆಗೆ ಅಗತ್ಯವಾದ 60 ಚದರ ಅಡಿ ಜಾಗವನ್ನು ಸ್ಥಳೀಯ ತಾಲ್ಲೂಕು ಅಥವಾ ಜಿಲ್ಲಾಡಳಿತ ಕಾಯ್ದಿರಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವು 2014ರ ನ. 11ರಂದು ಅಧಿಸೂಚನೆ ಹೊರಡಿಸಿದೆ.

Advertisement

ಆದರೆ, ಅದರಂತೆ ಕ್ರಮ ಕೈಗೊಳ್ಳಲಾಗುತ್ತಿಲ್ಲ. ರಾಜ್ಯದಲ್ಲಿ ಸ್ಮಶಾನ ಭೂಮಿಯ ಕೊರತೆ ಸಾಕಷ್ಟಿದೆ. ಅನೇಕ ಕಡೆಗಳಲ್ಲಿ ಸ್ಮಶಾನದ ಜಾಗಗಳನ್ನು ಒತ್ತುವರಿ ಮಾಡಲಾಗಿದೆ. ಒತ್ತುವರಿ ಮಾಡುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಎಲ್ಲ ಗ್ರಾಮಗಳಲ್ಲಿಯೂ ಸ್ಮಶಾನಗಳಿಗೆ ತಂತಿಬೇಲಿ ಹಾಕಬೇಕು ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂಬ ಅಧಿಸೂಚನೆ ಅಂಶಗಳನ್ನು ಕಡೆಗಣಿಸಲಾಗಿದೆ.

ಎಲ್ಲ ಸ್ಮಶಾನಗಳ ಸುತ್ತ ಮರಗಿಡ ಬೆಳೆಸಬೇಕು. ಈ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next