Advertisement

ರಾಜ್ಯ ಕ್ರೀಡಾ ಇಲಾಖೆಗೆ ಹೈಕೋರ್ಟ್‌ ನೋಟಿಸ್‌

09:37 AM Dec 05, 2017 | |

ಬೆಂಗಳೂರು: ಖಾಸಗಿ ಕ್ಲಬ್‌ ಫ‌ುಟ್ಬಾಲ್‌ ಹಾವಳಿಯಿಂದಾಗಿ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಅಭ್ಯಾಸ
ನಡೆಸಲಾಗದೆ ತೀವ್ರ ಪರದಾಟ ನಡೆಸುತ್ತಿದ್ದ ಅಥ್ಲೀಟ್‌ಗಳಿಗೆ ಸಿಹಿ ಸುದ್ದಿ ದೊರಕುವ ಮುನ್ಸೂಚನೆ ದೊರೆತಿದೆ. ಒಪ್ಪಂದ ಅವಧಿ ಮುಗಿದಿದ್ದರೂ ಕಂಠೀರವ ಕ್ರೀಡಾಂಗಣದಲ್ಲಿ ಫ‌ುಟ್‌ಬಾಲ್‌ ಕೂಟಕ್ಕೆ ಅವಕಾಶ ನೀಡಿದ್ದ ಯುವಸಬಲೀಕರಣ ಕ್ರೀಡಾ ಇಲಾಖೆಗೆ ಹೈಕೋರ್ಟ್‌ ಸೋಮವಾರ ನೋಟಿಸ್‌ ನೀಡಿ ಬಿಸಿ ಮುಟ್ಟಿಸಿದೆ.

Advertisement

ಕಳೆದ ಕೆಲವು ತಿಂಗಳಿನಿಂದ ಅಥ್ಲೀಟ್ಸ್‌ಗಳು ಜಿಂದಾಲ್‌ ಕ್ಲಬ್‌ ಫ‌ುಟ್ಬಾಲ್‌ ಆಯೋಜನೆಯಿಂದ ಕಂಗಾಲಾಗಿದ್ದರು. ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಾಗದೆ ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಒಳಗೆ ಅಭ್ಯಾಸ ನಡೆಸಿದ್ದರು. ಈ ಬಗ್ಗೆ ಹಲವಾರು ಬಾರಿ ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್‌ ಅಗರ್ವಾಲ್‌ ಅವರಿಗೆ ಕ್ರೀಡಾಪಟುಗಳು, ಕೋಚ್‌ಗಳು ಮನವಿ ಮಾಡಿಕೊಂಡಿದ್ದರು. ಅಥ್ಲೀಟ್‌ಗಳಿಗಿರುವ ಸಿಂಥೆಟಿಕ್‌ ಟ್ರ್ಯಾಕ್‌ ಅನ್ನು ಒಂದು ಖಾಸಗಿ ಕ್ಲಬ್‌ಗ ನೀಡಬೇಡಿ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಅಥ್ಲೀಟ್‌ಗಳು ಅಳಲು ತೋಡಿಕೊಂಡಿದ್ದರು. ಆದರೆ ಇಲಾಖೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಷ್ಟೇ ಹೇಳಿತ್ತು. ಈ ಬಗ್ಗೆ ಕ್ರೀಡಾ ಸಚಿವರ ಜತೆಗಿನ ಸಂಧಾನವೂ ಫ‌ಲಕೊಟ್ಟಿರಲಿಲ್ಲ. 

ಈ ನಡುವೆ ಫ‌ುಟ್‌ಬಾಲ್‌ ಕ್ಲಬ್‌ ಜತೆಗಿನ ಒಪ್ಪಂದ ಮುಗಿದಿದ್ದರೂ ಆಡಲು ಅವಕಾಶ ನೀಡ ಲಾಗಿತ್ತು. ಅಥ್ಲೀಟ್‌ಗಳಿಗಾಗುತ್ತಿರುವ ತೊಂದರೆ ಬಗ್ಗೆ ಉದಯವಾಣಿ ವಿಶೇಷ ವರದಿಗಳನ್ನು ಪ್ರಕಟಿಸಿ ಗಮನ ಸೆಳೆದಿತ್ತು. ಏನೆ ಪ್ರಯತ್ನ ನಡೆಸಿದ್ದರೂ ಅಥ್ಲೀಟ್‌ಗಳಿಗೆ ನ್ಯಾಯ ಸಿಕ್ಕಿರಲಿಲ್ಲ. ಒಟ್ಟಾರೆ ಘಟನೆಯಿಂದ ನೊಂದ ಕ್ರೀಡಾಪಟುಗಳು ಅಥ್ಲೆಟಿಕ್ಸ್‌ ಕೋಚ್‌ ಬೀಡು ನೇತೃತ್ವದಲ್ಲಿ ಈಗ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇವರೊಂದಿಗೆ ಮಾಜಿ ಅಥ್ಲೀಟ್‌ ಅಶ್ವಿ‌ನಿ ನಾಚಪ್ಪ, ಅರ್ಜುನ ಪ್ರಶಸ್ತಿ ಪುರಸ್ಕೃತ ಈಶನ್‌ ಸೇರಿದಂತೆ ಒಟ್ಟು 17 ಕೋಚ್‌ಗಳು ಹಾಗೂ 23 ಮಂದಿ ರಾಜ್ಯದ ರಾಷ್ಟ್ರೀಯ ಅಥ್ಲೀಟ್‌ಗಳು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಸೋಮವಾರ ಹಂಗಾಮಿ ಮುಖ್ಯ ನ್ಯಾ.ಎಚ್‌.ಜಿ ರಮೇಶ್‌ ಹಾಗೂ ನ್ಯಾ.ಪಿ.ಎಸ್‌ ದಿನೇಶ್‌ಕುಮಾರ್‌ ವಿಭಾಗೀಯ ಪೀಠ, ರಾಜ್ಯ ಸರ್ಕಾರ, ಯುವಜನ ಹಾಗೂ ಕ್ರೀಡಾ ಇಲಾಖೆ ನಿರ್ದೇಶಕರು, ಜೆಎಸ್‌ಡಬ್ಲೂ ಬೆಂಗಳೂರು ಫ‌ುಟ್‌ಬಾಲ್‌ ಕ್ಲಬ್‌ಗ ನೋಟಿಸ್‌ ಜಾರಿಗೊಳಿಸಿ ಡಿಸೆಂಬರ್‌ 6ಕ್ಕೆ ವಿಚಾರಣೆ ಮುಂದೂಡಿತು.

ಯುವ ಸಬಲೀಕರಣ ಕ್ರೀಡಾ ಇಲಾಖೆಗೆ ಕೋರ್ಟ್‌ ಸೂಚಿಸಿದ್ದೇನು?
ಇಲಾಖೆಗೆ ನ್ಯಾಯಾಧೀಶರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ ಎಂದು ಮೂಲಗಳು ಉದಯವಾಣಿಗೆ ತಿಳಿಸಿವೆ. ನ್ಯಾಯಾಲಯ ಇಲಾಖೆಗೆ ಹೇಳಿದಿಷ್ಟು, ಕಂಠೀರವ ಹೊರಾಂಗಣ ಕ್ರೀಡಾಂಗಣವನ್ನು 2014ರಲ್ಲೇ ಕ್ರೀಡಾ ಇಲಾಖೆ ಜೆಎಸ್‌ಡಬ್ಲೂಗೆ ನೀಡಿದೆ. ಇದಕ್ಕಾಗಿ ಇಲಾಖೆ 2014ರಲ್ಲಿ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದಂತೆ ಬೆಂಗಳೂರು ಎಫ್ಸಿ 2014ರಿಂದ ಸಿಂಥೆಟಿಕ್‌ ಟ್ರ್ಯಾಕ್‌ ಬಳಕೆ ಮಾಡಿಕೊಂಡಿದೆ. ಅಲ್ಲದೆ ಫ‌ುಟ್‌ಬಾಲ್‌ಗೆ ಸಂಬಂಧಿಸಿದ ಹಲವು ಚಟುವಟಿಕೆ ನಡೆಸಿದೆ. ಪರಿಣಾಮ ಸಿಂಥೆಟಿಕ್‌ ಟ್ರ್ಯಾಕ್‌ ತನ್ನ ಮೂಲ ಸ್ವರೂಪ ಕಳೆದುಕೊಂಡಿದೆ. ಈ ಬಗ್ಗೆ ನ್ಯಾಯಾಧೀಶರು ಇಲಾಖೆಯನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಒಪ್ಪಂದ ಅವಧಿ ಮುಗಿದಿದ್ದರೂ ಬೆಂಗಳೂರು ಫ‌ುಟ್ಬಾಲ್‌ ಕ್ಲಬ್‌ಗ ಹೇಗೆ ಮತ್ತೆ ಕ್ರೀಡಾಂಗಣ ಬಳಸಿಕೊಳ್ಳಲು ಅವಕಾಶ ನೀಡಿದ್ದೀರಿ. ಇದಕ್ಕೆ ಉತ್ತರ ನೀಡುವಂತೆ ಇಲಾಖೆಗೆ ಖಡಕ್‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಡಿ.6ಕ್ಕೆ ವಿಚಾರಣೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next