ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತ ಸಚಿನ್ ನಾರಾಯಣ್ ಮನೆ ಮತ್ತವರ ಕಂಪನಿ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ 53 ಲಕ್ಷ ಹಣವನ್ನು ಬಿಡುಗಡೆ ಮಾಡುವಂತೆ ಸಿಬಿಐಗೆ ಹೈಕೋರ್ಟ್ ಸೂಚಿಸಿದೆ.
ಡಿ.ಕೆ.ಶಿವಕುಮಾರ್ ಅವರ ದೆಹಲಿಯ ಫ್ಲಾಟ್ ಹಾಗೂ ಮನೆಯಲ್ಲಿ 2017ರಲ್ಲಿ ಏಳುಕೋಟಿ ರೂಪಾಯಿಗೂ ಅಧಿಕ ನಗದು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆಪ್ತರಾದ ಸಚಿನ್ ನಾರಾಯಣ್‌ಮತ್ತು ವೆಲ್‌ವರ್ತ್ ಸಾಫ್ಟ್ವೇರ್ ಪ್ರೈ.ಲಿ.ಕಚೇರಿ ಮೇಲೆ ದಾಳಿ ನಡೆಸಿ 53 ಲಕ್ಷ ರೂ.ಜಪ್ತಿ ಮಾಡಲಾಗಿತ್ತು. ಆ ಹಣ ಬಿಡುಗಡೆಗೊಳಿಸಲು ಸಿಬಿಐಗೆ ನಿರ್ದೇಶಿಸುವಂತೆ ಕೋರಿ ಸಚಿನ್ ನಾರಾಯಣ್ ಮತ್ತು ಅವರ ಕಂಪನಿ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿತು.
ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ವಾದಿಸಿ, ಪ್ರಕರಣಕ್ಕೂ ತಮ್ಮ ಕಕ್ಷಿದಾರರಿಗೂ ಯಾವುದೇ ಸಂಬಂಧ ಇಲ್ಲ. ಹೀಗಿದ್ದರೂ ಅರ್ಜಿದಾರರ ಮತ್ತವರ ಕಂಪನಿ ಮೇಲೆ ದಾಳಿ ನಡೆಸಲಾಗಿದೆ. ಕಂಪನಿಗೆ ಸೇರಿದ 53 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಆ ಹಣಕ್ಕೆ ದಾಖಲೆ ತೋರಿಸಿದರೂ ಬಿಡುಗಡೆ ಮಾಡಿಲ್ಲ. ಇದರಿಂದ ಕಂಪನಿಯ ವಹಿವಾಟು ನಡೆಸಲು ತೊಂದರೆ ಉಂಟಾಗುತ್ತಿದ್ದು, ಹಣ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್,ಈ ಹಣವು ಅಕ್ರಮ ಮೂಲದಿಂದ ಸಂಪಾದಿಸಲಾಗಿದೆ.ಈ ಬಗ್ಗೆ ತನಿಖೆ ನಡೆಸಬೇಕಿದ್ದು, ಹಣ ಬಿಡುಗಡೆಗೆ ಆದೇಶಿಸಬಾರದು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸಿಬಿಐ ಜಪ್ತಿ ಮಾಡಿದ ಹಣ ಅರ್ಜಿದಾರರಿಗೆ ಸೇರಿದೆ ಎಂಬುದು ದಾಖಲೆಗಳಿಂದ ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ಹಣವನ್ನು ವಶದಲ್ಲಿಟ್ಟುಕೊಂಡು ತನಿಖೆ ನಡೆಸುವ ಅಗತ್ಯ ಕಂಡುಬರುತ್ತಿಲ್ಲ. ಅರ್ಜಿದಾರ ಕಂಪನಿಯ ವಹಿವಾಟಿಗೆ ತೊಂದರೆ ಉಂಟಾಗುತ್ತಿರುವ ಕಾರಣ ಹಣ ಬಿಡುಗಡೆ ಮಾಡಬಹುದು. ಆದರೆ,ಅದರ ಮೂಲದ ಬಗ್ಗೆ ಸಿಬಿಐ ತನಿಖೆ ಮುಂದುವರಿಸಬಹುದು ಎಂದು ನಿರ್ದೇಶಿಸಿತು.