ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಿಣಿಗೆಮುಟ್ನೂರು ಗ್ರಾಮದ ಪಂಚೋಡಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕೋಳಿ ತ್ಯಾಜ್ಯ ನಿರ್ವಹಣೆ ಘಟಕವನ್ನು ಸ್ಥಳಾಂತರಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಗ್ರಾಮಸ್ಥರಾದ ಬಿ. ಪ್ರವೀಣ್ ಹಾಗೂ ಇತರ 10 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯ
ಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ, ಪುತ್ತೂರು ತಹಶೀಲ್ದಾರ್, ನೆಟ್ಟಿಣಿಗೆಮುಟ್ನೂರು ಗ್ರಾ.ಪಂ. ಅಧ್ಯಕ್ಷ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ. 18ಕ್ಕೆ ಮುಂದೂಡಿತು.
ಕೇಶವ ಪಾಟಾಳಿ ಅವರ ಜಾಗದಲ್ಲಿ ರಾಸಾಯನಿಕ ಸಹಿತ ಪ್ರಾಣಿ ತ್ಯಾಜ್ಯ ನಿರ್ವಹಣ ಘಟಕ ಇದ್ದು, ದಿನದ 24 ಗಂಟೆಯೂ 2 ಕಿ.ಮೀ. ವ್ಯಾಪ್ತಿ ದುರ್ಗಂಧ ಮಯವಾಗಿ ಉಸಿರಾಡಲು ಕಷ್ಟವಾಗಿದೆ. ಸಮೀಪದಲ್ಲೇ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿದ್ದು ಅಲ್ಲಿನ ಮಕ್ಕಳಿಗೆ ತೀವ್ರತರವಾದ ಆರೋಗ್ಯ ತೊಂದರೆ ಉಂಟಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಈ ಎಲ್ಲ ಕಾರಣಗಳಿಂದ ತ್ಯಾಜ್ಯ ನಿರ್ವಹಣ ಘಟಕವನ್ನು ಸ್ಥಳಾಂತರಿಸುವಂತೆ ಸಂಬಂಧ ಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.