Advertisement

Kudremukh: 9 ತಿಂಗಳ ಬಳಿಕ ಕುದುರೆಮುಖ ಕಬ್ಬಿಣ ಕಾರ್ಖಾನೆ ಕಾರ್ಯಾರಂಭ

01:47 AM Dec 31, 2024 | Team Udayavani |

ಮಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ ಹಾಗೂ ಸ್ವಂತ ಗಣಿ ಇಲ್ಲದ ಕಾರಣ 9 ತಿಂಗಳುಗಳ ಹಿಂದೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ (ಕೆಐಒಸಿಎಲ್‌) ಈಗ ಸಣ್ಣ ಪ್ರಮಾಣದಲ್ಲಿ ಮರಳಿ ಕಾರ್ಯಾರಂಭ ಮಾಡಿದೆ.

Advertisement

ಸ್ಥಾವರದಲ್ಲಿ ಇರುವ ಕಬ್ಬಿಣದ ಅದಿರಿನಿಂದಲೇ 10 ದಿನಗಳಿಂದ ಸ್ವಲ್ಪ ಪ್ರಮಾಣದಲ್ಲಿ ಉತ್ಪಾದನೆ ಆರಂಭಗೊಂಡಿದೆ. ಇದು ಹೆಚ್ಚು ದಿನಗಳಿಗೆ ಸಾಕಾಗದು, ಹಾಗಾಗಿ ಎನ್‌ಎಂಡಿಸಿ(ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ)ಯಿಂದ ಅದಿರನ್ನು ತುಸು ಕಡಿಮೆ ದರದಲ್ಲಿ ಪಡೆಯುವುದಕ್ಕೆ ಕೆಐಒಸಿಎಲ್‌ ಆಡಳಿತ ಯತ್ನ ಮಾಡುತ್ತಿದೆ.

ಈಗ ಆಗುತ್ತಿರುವ ಉತ್ಪಾದನೆ ಸಣ್ಣ ಪ್ರಮಾಣದ್ದಾಗಿದ್ದು, ರಫ್ತು ಮಾಡಲಾಗುತ್ತಿಲ್ಲ, ಬದಲಿಗೆ ದೇಶೀಯ ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತಿದೆ. ಗುತ್ತಿಗೆ ಕಾರ್ಮಿಕರನ್ನು ಕೆಲವು ತಿಂಗಳುಗಳ ಹಿಂದೆ ಕೆಲಸದಿಂದ ತೆಗೆಯಲಾಗಿದ್ದು, ಪ್ರಸ್ತುತ ಮತ್ತೆ ಆರಂಭಗೊಂಡಿರುವ ಕಾರಣ ಸುಮಾರು 100ರಷ್ಟು ಅರೆಕಾಲಿಕ ಕಾರ್ಮಿಕರನ್ನು ಕಾರ್ಖಾನೆಗೆ ಬಳಸಿಕೊಳ್ಳಲಾಗುತ್ತಿದೆ. ಎನ್‌ಎಂಡಿಸಿಯಿಂದ ಕಡಿಮೆ ದರಕ್ಕೆ ಅದಿರು ಸಿಕ್ಕಿದರೆ ಕಾರ್ಖಾನೆಯಲ್ಲಿ ಕೆಲಸ ಮುಂದುವರಿಸಬಹುದು, ಇಲ್ಲವಾದರೆ ಮತ್ತೆ ಕೆಲವೇ ತಿಂಗಳಲ್ಲಿ ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ.

ಚೀನದಲ್ಲಿ ಉಂಡೆ ಕಬ್ಬಿಣಕ್ಕೆ ಮಾರುಕಟ್ಟೆ ಕುಸಿದದ್ದರಿಂದಾಗಿ ಅಂತಾರಾಷ್ಟ್ರೀಯ ದರವೂ ಇಳಿಕೆಯಾಗಿ ಕೆಐಒಸಿಎಲ್‌ ಕಬ್ಬಿಣಕ್ಕೆ ಬೇಡಿಕೆ ಇಲ್ಲವಾಗಿತ್ತು. ಕೆಐಒಸಿಎಲ್‌ ಕಾರ್ಯನಿರ್ವಹಣೆಗೆ ಪ್ರತೀ ಟನ್‌ ಕಬ್ಬಿಣಕ್ಕೆ ಕನಿಷ್ಠ 135 ಡಾಲರ್‌ ಬೆಲೆ ಬೇಕು, ಇಲ್ಲವಾದರೆ ನಷ್ಟವೇ ಖಾತ್ರಿ.

ಗಣಿಯಿಲ್ಲದೆ ಕಂಗಾಲು
ಸ್ವಂತ ಗಣಿ ಪಡೆಯುವುದಕ್ಕೆ ಹಲವು ವರ್ಷಗಳಿಂದ ಕಂಪೆನಿ ನಿರಂತರ ಪ್ರಯತ್ನ ಮಾಡಿದ್ದು, ಬಳ್ಳಾರಿಯ ದೇವದಾರಿಯಲ್ಲಿ ಗಣಿ ನೀಡುವ ಪ್ರಾಥಮಿಕ ಪ್ರಕ್ರಿಯೆಗಳು ನಡೆದಿದ್ದವು. 404 ಹೆಕ್ಟೇರ್‌ ಪ್ರದೇಶದಲ್ಲಿ ಗಣಿಗಾಗಿ ಅರಣ್ಯ ಇಲಾಖೆಗೆ 300 ಕೋಟಿ ರೂ. ಮೊತ್ತ ಪಾವತಿಸಲಾಗಿತ್ತು.

Advertisement

ಆದರೆ ಕೊನೆಯ ಹಂತದಲ್ಲಿ ರಾಜ್ಯ ಸರಕಾರ ದೇವದಾರಿ ಜಾಗ ಹಸ್ತಾಂತರಿಸಬೇಕಾದರೆ ಕುದುರೆಮುಖ ಅರಣ್ಯದಲ್ಲಿ ಕಾನೂನು ಉಲ್ಲಂಘನೆಗಾಗಿ ಕಂಪೆನಿಯಿಂದ ಪಾವತಿಗೆ ಬಾಕಿ ಇರುವ 1,349 ಕೋಟಿ ರೂ. ದಂಡ ಹಾಗೂ 3,297 ಎಕ್ರೆ ಭೂಮಿ ಮರಳಿಸಬೇಕು ಎಂದು ಷರತ್ತು ವಿಧಿಸಿತ್ತು. ಹಾಗಾಗಿ ದೇವದಾರಿ ಜಮೀನು ಕಂಪೆನಿಯ ಕೈಸೇರದೆ ಸ್ವಂತ ಗಣಿ ಹೊಂದುವ ಕನಸು ಕಮರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next