Advertisement

ಸಹೋದ್ಯೋಗಿಯ ಪತ್ನಿ ಮೇಲೆ ಅತ್ಯಾಚಾರ: 8 CISF ಪೇದೆಗಳ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್‌

10:40 PM Jun 22, 2022 | Team Udayavani |

ಬೆಂಗಳೂರು: ಸಹದ್ಯೋಗಿಯ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಕೇಂದ್ರೀಯ ಕೈಗಾರಿಕ ಭದ್ರತ ಪಡೆಯ (ಸಿಐಎಸ್‌ಎಫ್) ಎಂಟು ಮಂದಿ ಪೇದೆಗಳನ್ನು ವಜಾಗೊಳಿಸಿರುವುದನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

Advertisement

ಎಂಟು ಮಂದಿ ಆರೋಪಿ ಪೇದೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಆಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಪೇದೆಗಳನ್ನು ಸೇವೆಯಿಂದ ವಜಾಗೊಳಿಸಿರುವ ಶಿಸ್ತುಪಾಲನ ಸಮಿತಿಯ ಆದೇಶವನ್ನು ಎತ್ತಿ ಹಿಡಿದು, ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶ ಸಮಂಜಸವಾಗಿದೆ ಎಂದು ಹೇಳಿದೆ.

ಆರೋಪಿಗಳ ವಿರುದ್ಧದ ಆರೋಪ ಸಾಬೀತುಪಡಿಸಲು ಸಾಕಷ್ಟು ದಾಖಲೆಗಳಿವೆ. ಶಿಸ್ತುಪಾಲನೆ ಸಮಿತಿಯು ತನ್ನ ಮುಂದಿರುವ ದಾಖಲೆ ಪರಿಗಣಿಸಿಯೇ ಆರೋಪಿಗಳನ್ನು ಸೇವೆಯಿಂದ ವಜಾ ಮಾಡಿದೆ. ಈ ಘಟನೆ ಅಪರೂಪದಲ್ಲಿ ಅಪರೂಪದ್ದಾಗಿದೆ ಹಾಗೂ ಸಿಐಎಸ್‌ಎಫ್ ಪಡೆಯ ಶಿಸ್ತು ಮತ್ತು ಸದಾಚಾರಕ್ಕೆ ವಿರುದ್ಧವಾಗಿದೆ. ಆದ್ದರಿಂದ ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶ ಸಮಂಜಸವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಇಲ್ಲ ಎಂದು ವಿಭಾಗೀಯ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣವೇನು?
ಪ್ರಕರಣದ ಎಂಟು ಆರೋಪಿಗಳು ಮತ್ತು ದೂರುದಾರೆಯ (ಸಂತ್ರಸ್ತ ಮಹಿಳೆ) ಪತಿ ಮೈಸೂರಿನ ಭಾರತೀಯ ರಿಸರ್ವ್‌ ಬ್ಯಾಂಕ್‌ ಮುದ್ರಣ ಪ್ರçವೇಟ್‌ ಲಿಮಿಟೆಡ್‌ನ‌ಲ್ಲಿ ಸಹೋದ್ಯೋಗಿಗಳಾಗಿದ್ದರು. ಅವರು ಸರ್ಕಾರಿ ಕ್ವಾಟರ್ಸ್‌ನಲ್ಲಿ ನೆಲೆಸಿದ್ದರು. ಸಂತ್ರಸ್ತೆಯ ಪತಿ ದೂರದ ಸ್ಥಳಕ್ಕೆ ತೆರಳಿರುವುದು ತಿಳಿದುಕೊಂಡು ಆರೋಪಿಗಳ ಈ ಕೃತ್ಯ ಎಸಗಿದ್ದಾರೆ.

2015ರ ಮಾರ್ಚ್‌-ಜೂನ್‌ ಅವಧಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಮಹಿಳೆಯನ್ನು ವಿಕಾಸ್‌ ವರ್ಮಾ ಫೋನ್‌ ಕರೆ ಮಾಡಿ, ಆರಂಭದಲ್ಲಿ ಆರೋಗ್ಯ ಮತ್ತು ಕೌಟುಂಬಿಕ ವಿಚಾರಗಳನ್ನು ಚರ್ಚಿಸುತ್ತಿದ್ದ. ಬಳಿಕ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ದೈಹಿಕ ಸಂಬಂಧ ಹೊಂದುವ ಇರಾದೆ ವ್ಯಕ್ತಪಡಿಸಿದ್ದ. ಒಂದು ದಿನ ರಾತ್ರಿ ಸಂತ್ರಸ್ತೆ ಮನೆಗೆ ಹೋಗಿ ಕರೆ ಮಾಡಿದ್ದ , ತಾನು ನಿಮ್ಮ ಮನೆ ಹೊರಗಿದ್ದೇನೆ. ಲೈಂಗಿಕ ಸಂಪರ್ಕ ಬೆಳೆಸದಿದ್ದರೆ ತಮ್ಮಿಬ್ಬರ ನಡುವಿನ ಮೊಬೈಲ್‌ ಮಾತುಕತೆಯನ್ನು ಪತಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದ.

Advertisement

ನಂತರ ಬಲವಂತವಾಗಿ ಮನೆ ಬಾಗಿಲು ತೆರೆದಿದ್ದ ವಿಕಾಸ್‌ ವರ್ಮಾ, ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದ. ಆ ನಂತರವೂ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಆ ನಂತರ ವಿಕಾಸ್‌ ವರ್ಮಾ ಇತರೆ ಸಹೋದ್ಯೋಗಿಗಳಾದ ಅಂಕುಶ್‌ ಪಿನಿಯಾ, ಪಿಂಕು ಕುಮಾರ್‌, ವಿ.ಕೆ ತಿವಾರಿ, ಚಂದನ್‌ ಕುಮಾರ್‌, ರಾಹುಲ್‌ ದಿವಾಕರ್‌, ಜಿತೇಂದ್ರ ಸಿಂಗ್‌ ಸೇರಿದಂತೆ ಎಂಟು ಆರೋಪಿಗಳು ಸಂತ್ರಸ್ತೆಗೆ ಕರೆ ಮಾಡಿ ವಿಕಾಸ್‌ ವರ್ಮಾ ಜೊತೆಗಿನ ಅಕ್ರಮ ಸಂಬಂಧದ ವಿಚಾರ ನಮಗೆ ತಿಳಿದಿದೆ. ತಮ್ಮೊಂದಿಗೂ ಲೈಂಗಿಕ ಸಂಪರ್ಕ ಬೆಳೆಸದಿದ್ದರೆ ಎಲ್ಲಾ ವಿಚಾರವನ್ನು ಪತಿಗೆ ಹೇಳುವುದಾಗಿ ಬೆದರಿಕೆ ಹಾಕಿದ್ದರು.ಬಳಿಕ ಒಬ್ಬರಾದ ಮೇಲೆ ಒಬ್ಬರು ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದರು.

2015ರ ಜೂ.28ರಂದು ಸಂತ್ರಸ್ತೆಯ ಪತಿಗೆ ಈ ವಿಚಾರ ತಿಳಿಯಿತು. ಇಡೀ ಘಟನೆ ಕುರಿತು 2015ರ ಜು.2ರಂದು ಸಂತ್ರಸ್ತೆ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ಶಿಸ್ತುಪಾಲನಾ ಸಮಿತಿಯು ಮತ್ತು ಮೇಲ್ಮನವಿ ಪ್ರಾಧಿಕಾರವು ಎಂಟು ಪೇದೆಗಳನ್ನು ಸೇವೆಯಿಂದ ವಜಾಗೊಳಿಸಿ 2015ರ ಆ.2ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಜಾ ಆದೇಶವನ್ನು ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ 2017ರ ಆ.8ರಂದು ಎತ್ತಿಹಿಡಿದಿತ್ತು. ಹಾಗಾಗಿ, ಆರೋಪಿಗಳು ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next