Advertisement

ಮುಂಚೆಯೇ ದೇಗುಲ ಇತ್ತಾ, ಇಲ್ಲವೇ ರಸ್ತೆ ಅತಿಕ್ರಮಿಸಿ ದೇಗಲ ಕಟ್ಟುತ್ತಿದ್ದಾರಾ?: ಕೋರ್ಟ್ 

01:00 PM Jan 12, 2024 | Team Udayavani |

ಬೆಂಗಳೂರು: ನಗರದ ಸುಂಕದಕಟ್ಟೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್‌, ಜಿಲ್ಲಾಧಿಕಾರಿಗಳಿಂದ ವಾಸ್ತವಿಕ ವರದಿ ಕೇಳಿದೆ.

Advertisement

ಈ ವಿಚಾರವಾಗಿ ಸುಂಕದಕಟ್ಟೆ ಸಿ. ಹೊನ್ನಯ್ಯ ಮತ್ತಿತರರು ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ಸಲ್ಲಾಪುರದಮ್ಮ ದೇವಾಲಯ ಟ್ರಸ್ಟ್‌ ಸದಸ್ಯರು ದೇವಸ್ಥಾನ ನಿರ್ಮಿಸುತ್ತಿರುವುದಕ್ಕೆ ಆಕ್ಷೇ ಪಿಸಿ ಸಲ್ಲಿಸಿರುವ ಸಾರ್ವ ಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯ ಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು, ಟ್ರಸ್ಟ್‌ ನವರು ಸರ್ಕಾರಿ ರಸ್ತೆಯಲ್ಲಿ ದೇವಸ್ಥಾನ ನಿರ್ಮಿಸುತ್ತಿರು ವುದಲ್ಲದೇ ಸಾರ್ವಜನಿಕರ ಓಡಾಟಕ್ಕೆ ರಸ್ತೆ ನಿರ್ಬಂಧಿಸಿ ದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ, ದೇವಾಲಯ ನಿರ್ಮಿಸಲಾಗಿದೆಯೇ, ಬಿಬಿಎಂಪಿ ವರದಿಯಲ್ಲಿ ಏನಿದೆ, ಸಾರ್ವಜನಿಕ ರಸ್ತೆಯನ್ನು ದೇವಸ್ಥಾನ ಅಥವಾ ಬೇರೆ ಪೂಜಾ ಸ್ಥಳ ನಿರ್ಮಿಸಲು ಬಳಸಬಹುದು ಎಂಬುದಕ್ಕೆ ದಾಖಲೆ ಎಲ್ಲಿದೆ, ಬಿಬಿಎಂಪಿ ಕಥೆ ನಮಗೆ ಬೇಕಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ದೇವಸ್ಥಾನ ನಿರ್ಮಿಸಲಾಗಿದೆಯೇ? ಇಲ್ಲವೇ ಎಂಬುದಷ್ಟೇ ನಮಗೆ ಬೇಕು. ನಾವು ಸಾರ್ವಜನಿಕ ಆಸ್ತಿಯ ರಕ್ಷಕರು. ಇದು ಖಾಸಗಿ ಆಸ್ತಿಯಲ್ಲ. ಸಾರ್ವಜನಿಕ ರಸ್ತೆಯಲ್ಲಿ ದೇವಾಲಯ, ಮಸೀದಿ, ಚರ್ಚ್‌ ನಿರ್ಮಿಸಿದರೇ ಜನರು ಏನು ಮಾಡಬೇಕು ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.

ಅಲ್ಲದೆ, ಬಿಬಿಎಂಪಿ ಪ್ರಮಾಣಪತ್ರದಲ್ಲಿ ಒತ್ತುವರಿಯಾಗಿದೆ ಎಂದು ಎಲ್ಲಿ ಉಲ್ಲೇಖೀಸಿದ್ದೀರಿ,  ಸಾರ್ವಜನಿಕ ಸ್ಥಳದಲ್ಲಿ ದೇವಾಲಯ ನಿರ್ಮಿಸಿದ್ದರೆ ನಾವು ಅದನ್ನು ಸಹಿಸುವುದಿಲ್ಲ. ಬಿಬಿಎಂಪಿ ವರದಿಯ ಆಧಾರದಲ್ಲಿ ನಮಗೆ ಆ ಭಾವನೆ ಇದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಬಿಬಿಎಂಪಿ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ದೇವಸ್ಥಾನ ನಿರ್ಮಿಸಲು ರಸ್ತೆ ಒತ್ತುವರಿ ಮಾಡಲಾಗಿದೆಯೇ ಅಥವಾ ಟ್ರಸ್ಟ್‌ ಸದಸ್ಯರು ಹೇಳುವಂತೆ ಹಲವು ವರ್ಷಗಳಿಂದ ಅಲ್ಲಿ ದೇವಸ್ಥಾನ ಇತ್ತೇ ಎಂಬುದನ್ನು ಉಲ್ಲೇಖೀಸಲು ಬಿಬಿಎಂಪಿ ವಿಫ‌ಲವಾಗಿದೆ ಎಂದು ನ್ಯಾಯಪೀಠ ಹೇಳಿತು.

Advertisement

ಆ ಹಿನ್ನೆಲೆಯಲ್ಲಿ ಇದರ ಬಗ್ಗೆ ಸ್ವತಂತ್ರ ಪ್ರಾಧಿಕಾರದಿಂದ ಸ್ಪಷ್ಟವಾದ ವರದಿ ಪಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಸಂಬಂಧಿಸಿದ ಎಲ್ಲರಿಗೂ ನೋಟಿಸ್‌ ಜಾರಿಗೊಳಿಸಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ನೇಮಿಸಿದ ಭೂ ದಾಖಲೆಗಳ ಉಪ ನಿರ್ದೇಶಕರು ತಾಂತ್ರಿಕ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಿಕ ವರದಿಯನ್ನು ಮೂರು ವಾರಗಳಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next