ಬೆಂಗಳೂರು: ಉಡುಪಿ ಜಿಲ್ಲೆಯ ಪೆರ್ಡೂರಿನ ಐತಿಹಾಸಿಕ ಅನಂತಪದ್ಮನಾಭ ದೇವಾಲಯದ ನಾಗವನ, ವಾಸ್ತು ಪರಿಧಿಗೆ ಧಕ್ಕೆ ಆಗದಂತೆ ಪೆರ್ಡೂರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-169ಎ (ಮಲ್ಪೆ-ಶಿವಮೊಗ್ಗ ಹೆದ್ದಾರಿ) ಆಗಲಗೊಳಿಸಲು ಸಾಧ್ಯವೇ ಎಂಬ ಬಗ್ಗೆ ತಿಳಿಸುವಂತೆ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.
ಈ ವಿಚಾರವಾಗಿ ಸ್ಥಳೀಯ ನಿವಾಸಿ ರಂಜೀತ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಸ್ವಲ್ಪ ಹೊತ್ತು ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮೇ 30ಕ್ಕೆ ಮುಂದೂಡಿತು. ಇದೇ ವೇಳೆ ದೇವಾಲಯಕ್ಕೆ ಧಕ್ಕೆ ಆಗದಂತೆ ಹೆದ್ದಾರಿ ಆಗಲಗೊಳಿಸಬಹುದೇ ಎಂಬ ಬಗ್ಗೆ ಉತ್ತರ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪರ ವಕೀಲರಿಗೆ ಸೂಚನೆ ನೀಡಿತು.
ದೇಗುಲದ ಪರ ವಾದ ಮಂಡಿಸಿದ ವಕೀಲ ಕೃಷ್ಣ ಎಸ್. ವ್ಯಾಸ್, ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸುವ ಕಾಮಗಾರಿಯಿಂದ ಪೆರ್ಡೂರಿನ ಐತಿಹಾಸಿಕ ಹಾಗೂ ಪ್ರಾಚೀನ ಅನಂತಪದ್ಮನಾಭ ದೇವಾಲಯಕ್ಕೆ ಧಕ್ಕೆ ಆಗಲಿದೆ. ದೇವಾಲಯದ ರಥಬೀದಿ, ನಾಗವನ ಜಾಗದಲ್ಲಿಯೇ ಹೆದ್ದಾರಿ ಬರಲಿದ್ದು, ಇದರಿಂದ ತೊಂದರೆ ಆಗಲಿದೆ. ದೇವಾಲಯವು ಮೂಲ ಸ್ವರೂಪವನ್ನು ಕಳೆದುಕೊಳ್ಳಲಿದೆ ಎಂದರು.
ರಸ್ತೆ ಅಗಲಗೊಳಿಸುವ ಸಂದರ್ಭಗಳಲ್ಲಿ ದೇವಾಲಯ ಸಹಿತ ಧಾರ್ಮಿಕ ಕಟ್ಟಡಗಳಿಗೆ ಧಕ್ಕೆ ಆಗುವುದಾದರೆ ಅಂತಹ ಸಂದರ್ಭಗಳಲ್ಲಿ ಸಂಬಂಧಿಸಿದ ಪ್ರಾಧಿಕಾರ ಪರ್ಯಾಯ ಮಾರ್ಗಗಳನ್ನು ಬಳಸಬಹುದು. ಈ ಬಗ್ಗೆ ಸುಪ್ರೀಂಕೋರ್ಟ್ ಕೂಡ ಆದೇಶ ನೀಡಿದೆ.
ಹಾಗಾಗಿ ಈ ಪ್ರಕರಣದಲ್ಲೂ ಸಚಿವಾಲಯ ಪರ್ಯಾಯ ಮಾರ್ಗದ ಬಗ್ಗೆ ಆಲೋಚಿಸಬೇಕು ಎಂದು ನ್ಯಾಯಾಲಯ ಮೌಖೀಕವಾಗಿ ಹೇಳಿತು.ಅದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪರ ವಕೀಲ ಎಸ್. ರಾಜಶೇಖರ್ ಅವರು, ದೇವಾಲಯದ ಜಾಗವನ್ನು ಬಿಟ್ಟು ಹೆದ್ದಾರಿ ಅಗಲಗೊಳಿಸಲು ಸಾಧ್ಯವೇ ಎಂಬ ಬಗ್ಗೆ ಮಾಹಿತಿ ಪಡೆದು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸುವುದಾಗಿ ಹೇಳಿದರು.