Advertisement

ಕೋವಿಡ್ ‌ಕಾರ್ಯ ವೈಖರಿಗೆ ಹೈಕೋರ್ಟ್‌ ಬೇಸರ  

12:17 PM Sep 30, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್‌ ಚಿಕಿತ್ಸೆ, ನಿಯಂತ್ರಣ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಅಗತ್ಯ ಸಲಹೆ ನೀಡಲು ರಚಿಸಲಾಗಿರುವ ಬಿಬಿಎಂಪಿ ಮಟ್ಟದ ತಜ್ಞರ ನಿಗಾ ಸಮಿತಿ ಕಾರ್ಯವೈಖರಿಗೆ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.

Advertisement

ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಲು ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿಎ.ಎಸ್‌. ಓಕ್‌ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರಿ ವಕೀಲರು ರಾಜ್ಯ ಮಟ್ಟದ ತಜ್ಞರ ನಿಗಾ ಸಮಿತಿ ಕಾರ್ಯಚಟುವಟಿಕೆ ಗಳ ಕುರಿತ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಆ ವರದಿಯಲ್ಲಿ ಬೆಂಗಳೂರು ನಗರದ ನಿಗಾ ಸಮಿತಿ ಕಾರ್ಯಚಟುವಟಿಕೆ ಕುರಿತ ಯಾವುದೇ ಮಾಹಿತಿ ಇರಲಿಲ್ಲ. ನಗರ ನಿಗಾ ಸಮಿತಿಯೂ ಯಾವುದೇ ವರದಿ ಸಲ್ಲಿಸದಕಾರಣ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ನಗರ ನಿಗಾ ಸಮಿತಿ ಜಿಲ್ಲೆಯ ಕೋವಿಡ್‌ ಆಸ್ಪತ್ರೆ, ಕೇರ್‌ ಸೆಂಟರ್‌ಗೆ ಭೇಟಿ ನೀಡಿ ಸೌಲಭ್ಯ, ಕಾರ್ಯನಿರ್ವಹಣೆ ಪರಿಶೀಲಿಸಿಲ್ಲ. ನ್ಯಾಯಾಲಯಕ್ಕೆ ವರದಿ ಸಲ್ಲಿಸಿಲ್ಲ. ಮತ್ತೂಂದೆಡೆಅತಿಹೆಚ್ಚು ಕೋವಿಡ್‌ ಪ್ರಕರಣ ದಾಖಲಾಗುತ್ತಿದ್ದು ಈ ಪರಿಸ್ಥಿತಿಇರುವಾಗ ನಿಗಾ ಸಮಿತಿ ಕೆಲಸಮಾಡದೇ ಇರುವುದು ಎಷ್ಟು ಸರಿ? ಎಂದು ಪ್ರಶ್ನಿಸಿತು.

ಅಲ್ಲದೆ, ವೈದ್ಯರು, ಸಿಬ್ಬಂದಿ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಲು ಕಳೆದ 6 ತಿಂಗಳಿಂದ ಅವಿರತ ಶ್ರಮಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲವಾದರೆ ಹೇಗೆ ಚಿಕಿತ್ಸೆ ಒದಗಿಸಲು ಸಾಧ್ಯ? ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿರುವ ಸೌಲಭ್ಯಗಳನ್ನು ನಿಗಾ ಸಮಿತಿ ಪರಿಶೀಲನೆ ನಡೆಸಬೇಕಲ್ಲವೇ? ಸರ್ಕಾರದ ವರದಿಯಲ್ಲಿ ಕಾರ್ಯ ಚಟುವಟಿಕೆ ಬಗ್ಗೆ ಒಂದೇ ಪದವೂ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿತು. ಹಾಗೆಯೇ, ಕೂಡಲೇ ಸಮಿತಿ ತನ್ನ ಕಾರ್ಯ ನಿರ್ವಹಿಸಲು ಮುಂದಾಗಿ ಸಮಗ್ರ ವರದಿ ಸಲ್ಲಿಸ ಬೇಕು. ಕೋವಿಡ್‌ ಆಸ್ಪತ್ರೆಯಲ್ಲಿನ ರೋಗಿಗಳಿಗೆ ದೂರು ನೀಡಲು ಸಹಾಯವಾಣಿ ಸ್ಥಾಪಿಸಬೇಕು. ಕೋವಿಡ್‌ ಆಸ್ಪತ್ರೆಗಳ ಮೇಲೆ ನಿರಂತರ ನಿಗಾ ವ್ಯವಸ್ಥೆ ರೂಪಿಸಬೇಕು ಎಂದು ನಿರ್ದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next