ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆರ್‌ಟಿಇ ಕಾಯ್ದೆ ವ್ಯಾಪ್ತಿಗಳೊಪಡುವ ಶಾಲಾ ಮಕ್ಕಳಿಗೆ ಎರಡನೇ ಜತೆ ಸಿದ್ಧಪಡಿಸಿದ ಶಾಲಾ ಸಮವಸ್ತ್ರ ಪೂರೈಸದೇ ಇರುವ ಬಗ್ಗೆ ಸಮರ್ಪಕ ಮಾಹಿತಿ ಒದಗಿಸುವಂತೆ ಸೋಮವಾರ ರಾಜ್ಯಸರ್ಕಾರಕ್ಕೆ ನಿರ್ದೇಶನ ನೀಡಿರುವ ಹೈಕೋರ್ಟ್, ಇಲ್ಲದೆ ಹೋದಲ್ಲಿ ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಲಿದೆ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಕೊಪ್ಪಳ ಜಿಲ್ಲೆ ಕಿನ್ನಾಳದ ದೇವಪ್ಪ ಬಸಪ್ಪ ಹರಿಜನ ಎಂಬುವರ 8 ವರ್ಷದ ಪುತ್ರ ಮಂಜುನಾಥ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಜಿತ್ ಆನಂದ್ ಶೆಟ್ಟಿ ವಾದ ಮಂಡಿಸಿ, 2019-20ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳು ಸೇರಿದಂತೆ ಆರ್‌ಟಿಇಯಡಿ ಪ್ರವೇಶ ಪಡೆದುಕೊಂಡ ಮಕ್ಕಳಿಗೆ ಒಂದು ಜತೆಗೆ ಸಿದ್ದಪಡಿಸಿದ (ಹೊಲಿಸಿದ) ಸಮವಸ್ತ್ರ ಮಾತ್ರ ವಿತರಿಸಲಾಗಿದೆ. ಎರಡನೇ ಜತೆ ಸಿದ್ದಪಡಿಸಿದ ಸಮವಸ್ತ್ರ ಈವರೆಗೆ ವಿತರಿಸಲಾಗಿಲ್ಲ. ಇದರಿಂದ ಮಕ್ಕಳಿಗೆ ಮತ್ತು ಪೋಷಕರಿಗೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ ಅನೇಕ ಶಾಲೆಗಳಲ್ಲಿ ಇನ್ನೂ ಸಹ ಒಂದು ಜತೆ ಸಿದ್ಧಪಡಿಸಿದ ಸಮವಸ್ತ್ರ ಸಹ ವಿತರಿಸಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ಆಗ, ಸರ್ಕಾರವೇ ಹೊರಡಿಸಿರುವ ನಿಯಮದ ಪ್ರಕಾರ ಆರ್‌ಟಿಇ ಕಾಯಿದೆ ಅಡಿ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಉಚಿತ ಶಿಕ್ಷಣ ಎಂದರೆ ಅದರಲ್ಲಿ ಪುಸ್ತಕ, ಬ್ಯಾಗ್, ಸಮವಸ್ತ್ರ ಮತ್ತು ಶೂ ಸೇರಿದೆ. ಸರ್ಕಾರ ಏಕೆ ಎರಡನೇ ಜತೆ ಸಮವಸ್ತ್ರ ನೀಡುತ್ತಿಲ್ಲ. ಈ ಬಗ್ಗೆ ಸಮರ್ಪಕ ಮಾಹಿತಿ ನೀಡಿ, ಇಲ್ಲದಿದ್ದರೆ ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಿಲಿದೆ ಎಂದು ಸರ್ಕಾರದ ಪರ ವಕೀಲರಿಗೆ ತಾಕೀತು ಮಾಡಿತು.
ಇದೀಗ ಕೇಂದ್ರದ ಅನುದಾನ ಬಂದಿಲ್ಲ, ಹಾಗಾಗಿ 2ನೇ ಜತೆ ಸಮವಸ್ತ್ರ ನೀಡಿಲ್ಲ ಎಂದು ರಾಜ್ಯ ಸರ್ಕಾರದ ಪರ ವಕೀಲರು ತಿಳಿಸಿದರು. ಅದಕ್ಕೆ ನ್ಯಾಯಪೀಠ, ಮೊದಲು ರಾಜ್ಯ ಸರ್ಕಾರ ಹಣ ಖರ್ಚು ಮಾಡಿ ಎರಡನೇ ಜತೆ ಸಮವಸ್ತ್ರ ವಿತರಿಸಲಿ ನಂತರ ಅದು ಕೇಂದ್ರದಿಂದ ಹಣ ಪಡೆದುಕೊಳ್ಳಬೇಕು ಎಂದು ಪ್ರತಿಕ್ರಿಯಿಸಿತು.