ಬೆಂಗಳೂರು: ಅಧೀನ ನ್ಯಾಯಾಲಯದ ನ್ಯಾಯಾಧೀಶರ ಹೆಸರುಗಳನ್ನು ಪ್ರತಿವಾದಿಗಳ ಪಟ್ಟಿಯಲ್ಲಿ ಸೇರಿಸಿದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಕ್ರಮವನ್ನು ಮಂಗಳವಾರ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯಪೀಠ, ನ್ಯಾಯಾಧೀಶರನ್ನೇ ಪ್ರತಿವಾದಿಗಳನ್ನಾಗಿ ಮಾಡುವ ಮೂಲಕ ನೀವು ಕಾನೂನಿನ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ ಎಂದು ಗೌರಿ ಲಂಕೇಶ್ ಹತ್ಯೆ ಪ್ರಕಣದ ಆರೋಪಿಗಳ ಮೇಲೆ ಹರಿಹಾಯ್ದರು.
“ನಿಮಗೆ ಕಾನೂನಿನ ಕನಿಷ್ಟ ಜ್ಞಾನವೂ ಇಲ್ಲವೇ’ ಎಂದು ಅರ್ಜಿದಾರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ನ್ಯಾಯಾಲಯ ಇಂತಹದ್ದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿ, ಅರ್ಜಿಯಲ್ಲಿ ಸೇರಿಸಲಾಗಿದ್ದ ನಗರದ 5ನೇ ಎಸಿಎಂಎಂ ನ್ಯಾಯಾಲಾಯದ ಮ್ಯಾಜಿಸ್ಟ್ರೇಟ್ ಸೋಮಶೇಖರ್, 3ನೇ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ವಿ. ಪ್ರಕಾಶ್, 1ನೇ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಜಗದೀಶ್ ಹಾಗೂ 4ನೇ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮಾಲಾ ಅವರ ಹೆಸರಗಳನ್ನು ಪ್ರತಿವಾದಿಗಳ ಪಟ್ಟಿಯಿಂದ ತೆಗೆದು ಹಾಕುವಂತೆ ಆದೇಶಿಸಿದರು.
ಪ್ರಕರಣದಲ್ಲಿ ಬಂಧನಕ್ಕೊಳಗಾದ ನಮಗೆ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶ ನೀಡುವಲ್ಲಿ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ನಿರ್ಲಕ್ಷ ತೋರಿದ್ದಾರೆ ಎಂದು ಆಕ್ಷೇಪಿಸಿ ಆರೋಪಿಗಳಾದ ಸುಜಿತ್ ಕುಮಾರ್, ಮನೋಹರ ಯಡವೆ, ಅಮೋಲ್ ಕಾಳೆ, ಅಮಿತ್ ರಾಮಚಂದ್ರ ದೇಗ್ವೇಕರ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಕೀಲ ಎನ್.ಪಿ. ಅಮೃತೇಶ್ ವಕಾಲತ್ತು ವಹಿಸಿದ್ದರು.
ಪೊಲೀಸರಿಂದ ಹಿಂಸೆ: ವಿಚಾರಣೆ ನೆಪದಲ್ಲಿ ಪೊಲೀಸರು ನಮಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಹಿಂಸೆಯ ಬಗ್ಗೆ ನ್ಯಾಯಾಧೀಶರ ಮುಂದೆ ಬಾಯಿ ಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದೂ ಎಚ್ಚರಿಸಿದ್ದಾರೆ. ಇದರಿಂದಾಗಿ ನಾವು ವಕೀಲರ ನೆರವು ಪಡೆಯಲು ಸಾಧ್ಯವಾಗಿಲ್ಲ. ಈ ಪ್ರಕರಣದ ವಿಚಾರಣೆ ನಡೆಸಿರುವ ನಾಲ್ವರು ಮ್ಯಾಜಿಸ್ಟ್ರೇಟರು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಿದ್ದಾರೆ.
ಹಾಗಾಗಿ ತಪ್ಪು ಎಸಗಿರುವ ಮ್ಯಾಜಿಸ್ಟ್ರೇಟರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು. ಈ ನಾಲ್ವರು ನ್ಯಾಯಾಧೀಶರು ಆರೋಪಿಗಳಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಬೇಕು, ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದಲ್ಲಿರುವ ದಾಖಲೆಗಳನ್ನು ಹೈಕೋರ್ಟ್‌ಗೆ ತರಿಸಿಕೊಂಡು ಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.